

ಪ್ರಸಿನ್ ಕೆ.ಆರ್. ಹಾಸನ
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದ್ದು, ಈ ಬಾರಿ ಹಲವು ವಿಚಾರದಲ್ಲಿ ದಾಖಲೆ ಬರೆದಿದೆ.
ಪ್ರತಿ ಬಾರಿಯೂ ಅಧಿಕ ಭಕ್ತರು ಆಗಮಿಸುವ ಮೂಲಕ ದಾಖಲೆ ಬರೆದರೆ, ಆದಾಯ ಸಂಗ್ರಹದಲ್ಲಿ ಕೂಡ ಎಲ್ಲ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದೆ. ಅಲ್ಲದೆ ವ್ಯವಸ್ಥೆಯಲ್ಲಿ ಹಾಗೂ ಜನರು ಅತಿ ಕಡಿಮೆ ಸಮಯದಲ್ಲಿ ದೇವಿ ದರ್ಶನ ಪಡೆಯುವ ವಿಚಾರದಲ್ಲಿ, ಶಿಸ್ತು ಇನ್ನಿತರ ಹಲವು ವಿಚಾರಗಳಲ್ಲಿ ಈ ಬಾರಿ ಹಾಸನಾಂಬ ಉತ್ಸವ ವಿಶೇಷ ಎನಿಸಿದೆ.
ಅ.9ರಿಂದ ಅ.23ರವರೆಗೆ 15 ದಿನಗಳು ನಡೆದ ಉತ್ಸವದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಹಣ ಹರಿದು ಬಂದಿದೆ. ಕಳೆದ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ 12.50 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ 1000 ರೂ.ಮತ್ತು 300 ರೂ. ಪ್ರವೇಶ ದರದ ಟಿಕೆಟ್ ಹಾಗೂ ಲಾಡು ಮಾರಾಟದಿಂದ 21.82 ಕೋಟಿ ರೂ. ಸಂಗ್ರಹವಾಗುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಈ ಬಾರಿ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ.
ಅ.9 ರಿಂದ ಅ.23ರವರೆಗೂ 15 ದಿನದಲ್ಲಿ 1000 ರೂ.ಮತ್ತು 300 ರೂ.ಟಿಕೆಟ್ ಖರೀದಿಸಿ 3,60,000 ಭಕ್ತರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಒಟ್ಟು 12.63 ಹಣ ಸಂಗ್ರಹವಾಗಿದೆ. ಇ-ಹುಂಡಿ ಮತ್ತು ಜಾಹೀರಾತು ಮೂಲಕ 5.75 ಲಕ್ಷ ರೂ.,ದೇಣಿಗೆಯಿಂದ 40,908 ರೂ., ಟಿಕೆಟ್ ಹಾಗೂ ಲಾಡು ಮಾರಾಟದಿಂದಲೇ 9.69 ಕೋಟಿ ರೂ. ಸೇರಿ ಒಟ್ಟು 12.63 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.
2023ನೇ ಸಾಲಿನಲ್ಲಿ 1000 ರೂ., 300ರೂ.ಟಿಕೆಟ್ ಹಾಗೂ ಲಾಡು ಮಾರಾಟದಿಂದ ಒಟ್ಟು 6,15,17,160ರೂ. ಸಂಗ್ರಹವಾಗಿತ್ತು. 2022ರಲ್ಲಿ 1,29,69,660 ರೂ. ಸಂಗ್ರಹವಾಗಿತ್ತು.
ರಾಜ್ಯ ಮತ್ತು ದೇಶದ ಹಲವು ದೇವಾಲಯಗಳು ವರ್ಷವೆಲ್ಲ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತವೆ. ಆದರೆ ವರ್ಷದಲ್ಲಿ ಒಮ್ಮೆ ಬಾಗಿಲು ತೆರೆದು ಕೆಲ ದಿನಗಳು ಮಾತ್ರ ಭಕ್ತರಿಗೆ ದರ್ಶನ ಕರುಣಿಸಿ ಕೋಟ್ಯಂತರ ರೂ. ಆದಾಯ ಗಳಿಕೆ ಮಾಡುವಂಥ ದೇವಾಲಯಗಳಲ್ಲಿ ಹಾಸನಾಂಬ ದೇವಾಲಯ ಅಗ್ರಸ್ಥಾನ ಪಡೆದಿದೆ.
ಭಕ್ತರ ಸಂಖ್ಯೆಯಲ್ಲಿಯೂ ದಾಖಲೆ: ಕಳೆದ 10 ವರ್ಷಗಳಲ್ಲಿ ಹಾಸನಾಂಬ ದೇವಿ ದರ್ಶನಕ್ಕೆ ಇಷ್ಟೊಂದು ಜನ ಬಂದಿರುವ ಉದಾಹರಣೆಗಳಿಲ್ಲ. ಈ ಬಾರಿ 26.13 ಲಕ್ಷಕ್ಕೂ ಹೆಚ್ಚು ಭಕ್ತರು ಕೇವಲ 15 ದಿನದಲ್ಲಿ ದರ್ಶನ ಪಡೆಯುವ ಮೂಲಕ ವಿನೂತನ ದಾಖಲೆ ನಿರ್ಮಾಣ ಮಾಡಿದೆ.
ಅದರಲ್ಲಿ 9ನೇ ದಿನ ಅಂದರೆ ಅ.17 ಶುಕ್ರವಾರ 3,61,748 ಭಕ್ತರು ಆಗಮಿಸಿದ್ದು ಇತಿಹಾಸ. ಇನ್ನುಳಿದ ದಿನಗಳಲ್ಲಿ 1.50 ರಿಂದ 2.50 ಲಕ್ಷದವರೆಗೂ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ದೇವಿ ಮಹಿಮೆ ಮತ್ತು ಇದರ ಪ್ರಚಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಂತೆ ಭಕ್ತರ ಸಂಖ್ಯೆಯೂ ಏರಿಕೆಯಾಗುತ್ತಿದೆ. 2024ರಲ್ಲಿ 17.47ಲಕ್ಷ, 2023ರಲ್ಲಿ 14 ಲಕ್ಷ ಭಕ್ತರು ದರ್ಶನ ಪಡೆದಿದ್ದರು.
25,59,87,327 ರೂ. ಸಂಗ್ರಹ: ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಒಟ್ಟು 25,59,87,327 ರೂ. ಸಂಗ್ರಹವಾಗಿದೆ.
ಶುಕ್ರವಾರ ನಗರದ ಚನ್ನಕೇಶವ ದೇವಾಲಯ ಸಮೀಪ ಇರುವ ತೇರ ಪಂಥ್ ಸಭಾಭವನ ಆವರಣದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ದೇವಾಲಯದ ಆಡಳಿತಾಧಿಕಾರಿ ಮಾರುತಿ ಮೇಲ್ವಿಚಾರಣೆಯಲ್ಲಿ ಬಿಗಿ ಭದ್ರತೆಯೊಂದಿಗೆ ಹುಂಡಿ ಎಣಿಕೆ ನಡೆಯಿತು. ಸಿಸಿ ಕ್ಯಾಮರಾ ಹಾಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಹುಂಡಿಯಲ್ಲಿ 3, 68,12,275 ರೂ. ಸಂಗ್ರಹವಾಗಿದೆ. ಈ ಬಗ್ಗೆ ಉಪವಿಭಾಗಾಧಿಕಾರಿಯೂ ಆದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದರು.
ವಿಶೇಷ ದರ್ಶನದ ಸಾವಿರ ರೂ., ಮುನ್ನೂರು ರೂ. ಟಿಕೆಟ್ ಮತ್ತು ಲಾಡು ಮಾರಾಟದಿಂದ 21,91,75, 052 ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂಪಾಯಿ ಸಂಗ್ರಹವಾಗಿದೆ. ಒಟ್ಟು 25 ಕೋಟಿ 59 ಲಕ್ಷದ 87 ಸಾವಿರದ 327 ರೂ.ಸಂಗ್ರಹವಾಗಿದೆ. ಕಾಣಿಕೆ ರೂಪದಲ್ಲಿ 75 ಗ್ರಾಂ 300 ಮಿಲಿ ಚಿನ್ನ, 1 ಕೆಜಿ 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.
ವಿದೇಶಿ ಕರೆನ್ಸಿಗಳನ್ನು ಹುಂಡಿಗೆ ಹಾಕಿರುವ ಭಕ್ತರು: ಭಕ್ತರು ವಿದೇಶಿ ಕರೆನ್ಸಿಗಳನ್ನು ಹುಂಡಿಗೆ ಹಾಕಿದ್ದಾರೆ. ಇಂಡೋನೇಷಿಯಾ-263 ರೂ, ನೇಪಾಳ-3.13 ರೂ, ಮಲೇಷಿಯಾ-28.75 ರೂ, ಯುಎಸ್‌ಎ-526 ರೂ, ಮಾಲ್ಡೀವ್ಸ್-57.29 ರೂ, ಕೆನಡಾ-6259 ರೂ, ಕುವೈತ್-286 ರೂ, ಯುಎಐ-239 ರೂ. ಸೇರಿ 7653 ರೂ. ವಿದೇಶ ಕರೆನ್ಸಿ ಹುಂಡಿಗೆ ಹಾಕಿದ್ದಾರೆ. 42,530 ಹಳೇ ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ. ಸಿದ್ದೇಶ್ವರ ಸ್ವಾಮಿ ಕುಂತಿಯಲ್ಲಿ 15,17,785 ರೂ.ಸಂಗ್ರಹವಾಗಿದೆ. 15,17,785 ಚಿಲ್ಲರೆ ಕಾಣಿಕೆ ಹಾಕಿದ್ದಾರೆ.
ಬೇಡಿಕೆ ಪತ್ರಗಳು
ಹುಂಡಿ ಎಣಿಕೆ ವೇಳೆ ಈ ಬಾರಿ ಭಕ್ತರ ಭಾವನಾತ್ಮಕ ಕೋರಿಕೆ ಪತ್ರಗಳೇ ಹೆಚ್ಚು ಪತ್ತೆಯಾಗಿವೆ. ಪುಟಗಟ್ಟಲೆ ಪತ್ರಗಳನ್ನು ಬರೆದು ದೇವಿಗೆ ಸಲ್ಲಿಸಿರುವ ಭಕ್ತರು ತಾಯಿ, ನನ್ನ ಕಷ್ಟ ದೂರಮಾಡು, ಇಷ್ಟಾರ್ಥ ಸಿದ್ಧಿಸಲಿ, ಕುಟುಂಬಕ್ಕೆ ಸುಖಶಾಂತಿ ದೊರಕಲಿ ಎಂಬ ಅಂತರಂಗದ ಮನವಿ ಪತ್ರಗಳು ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿವೆ. ಹಣದ ರಾಶಿಯಿಂದ ಈ ಬೇಡಿಕೆ ಪತ್ರಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸಿದರು. ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಪತ್ರಗಳ ವಿಷಯವನ್ನು ಬಹಿರಂಗಪಡಿಸದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪತ್ರಗಳ ರಾಶಿಯನ್ನು ಪ್ರತ್ಯೇಕ ಹುಂಡಿಯಲ್ಲಿ ತುಂಬಿ ಸುರಕ್ಷಿತವಾಗಿ ಇಡಲಾಗುತ್ತಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ.
300ಕ್ಕೂ ಅಧಿಕ ಸಿಬ್ಬಂದಿ ಭಾಗಿ
ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. 10 ರೂ. 20 ರೂ. 50, 100, 500 ರೂ. ಮುಖಬೆಲೆಯ ನೋಟುಗಳನ್ನು ಕಂತೆ ಮಾಡಿ ಎಣಿಕೆ ಮಾಡಲಾಯಿತು. ಈ ಕಾರ್ಯಕ್ಕೆ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು
ಹಿಂದಿನ ವರ್ಷಗಳ ಆದಾಯದ ವಿವರ
2013ರಲ್ಲಿ 1.21 ಕೋಟಿ ರೂ.
2014ರಲ್ಲಿ 1.27 ಕೋಟಿ ರೂ.
2015ರಲ್ಲಿ 1.46 ಕೋಟಿ ರೂ.
2016ರಲ್ಲಿ 2.67 ಕೋಟಿ ರೂ.
2017ರಲ್ಲಿ 4.14 ಕೋಟಿ ರೂ.
2018ರಲ್ಲಿ 2.64 ಕೋಟಿ ರೂ.
2019ರಲ್ಲಿ 3.06 ಕೋಟಿ ರೂ.
2020ರಲ್ಲಿ 22.79 ಲಕ್ಷ ರೂ.
2021ರಲ್ಲಿ 1.54 ಕೋಟಿ ರೂ.
2022ರಲ್ಲಿ 3.69 ಕೋಟಿ ರೂ.
2023ರಲ್ಲಿ 8.72ಕೋಟಿ ರೂ.
2024ರಲ್ಲಿ 12.63_ ಕೋಟಿ ರೂ.
2025ರಲ್ಲಿ 25.59 ಕೋಟಿ ರೂ.