

ಬೇಲೂರು: ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ವಿಶ್ವವಿಖ್ಯಾತ ಹಳೇಬೀಡಿನ ಹೊಯ್ಸಳೇಶ್ವರ ದೇಗುಲ ಆವರಣದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜತೆಗೆ ಬೇಲೂರು ಮತ್ತು ಹಳೇಬೀಡಿನ ಐತಿಹಾಸಿಕ ಮಹತ್ವ ಹಾಗೂ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಜನರಿಗೆ ತಿಳಿಸಲಾಯಿತು.
ಸಮಾರಂಭ ಅಂಗವಾಗಿ ಹಳೇಬೀಡಿನ ಕೇದಾರನಾಥ ದೇವಾಲಯದ ಸಮೀಪ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ನಂತರ ಡೊಳ್ಳು ಕುಣಿತ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಕೇದಾರನಾಥ ದೇವಾಲಯದಿಂದ ವಿಶ್ವವಿಖ್ಯಾತ ಹೊಯ್ಸಳೇಶ್ವರ ದೇಗುಲದವರೆಗೆ ಹೆರಿಟೇಜ್ ವಾಕ್ ನಡೆಸಲಾಯಿತು. ದಾರಿಯುದ್ದಕ್ಕೂ ಪಾರಂಪರಿಕ ತಾಣಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಈ ವೇಳೆ ಹೊಯ್ಸಳೇಶ್ವರ ದೇಗುಲದ ಆವರಣ ಗಿಡ ನೆಟ್ಟು ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಹೆರಿಟೇಜ್ ವಾಕ್‌ನ ಸಂದರ್ಭ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಕುರಿತು ಸ್ಥಳೀಯ ಮಾರ್ಗದರ್ಶಿಗಳು(ಗೈಡ್‌ಗಳು) ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಹಲವು ಸಲಹೆಗಳನ್ನು ಪಡೆಯಲಾಯಿತಲ್ಲದೆ ಬೇಲೂರು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಗತ್ಯವಿದ್ದಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಕಲ್ಪಿಸುವ ಕುರಿತು ಸಲಹೆಗಳು ವ್ಯಕ್ತವಾದವು. ಸ್ಥಳೀಯರ ಅನುಭವ ಹಾಗೂ ಸಲಹೆಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಪರಿಗಣಿಸುವ ಕುರಿತು ಚರ್ಚಿಸಲಾಯಿತು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ವಿಶ್ವವಿಖ್ಯಾತ ಹಳೇಬೀಡಿನ ಹೊಯ್ಸಳೇಶ್ವರ ದೇಗುಲವು ಹೊಯ್ಸಳರ ಶಿಲ್ಪಕಲೆಯ ವೈಭವ ಸಾರುವ ಅಪೂರ್ವ ಐತಿಹಾಸಿಕ ಸ್ಮಾರಕವಾಗಿದೆ. ಇಲ್ಲಿನ ಸೂಕ್ಷ್ಮ ಕೆತ್ತನೆಗಳು, ವಿಶಿಷ್ಟ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಂತಹ ಅಮೂಲ್ಯ ಸ್ಮಾರಕಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರವಾಸೋದ್ಯಮವು ಸಂಸ್ಕೃತಿ, ಶಾಂತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಇಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಗೌರವಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ರೂಪಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಗಣ್ಯರು ಮತ್ತು ಸಾರ್ವಜನಿಕರಿದ್ದರು.