ಸೇವಾ ಅವಧಿಯನ್ನು ಸಮರ್ಥವಾಗಿ ನಿಭಾಯಿಸಿ

anage the service period effectively.
ಅರಸೀಕೆರೆ ನಗರದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮೋಹನ್ ಕುಮಾರ್, ಡಾ.ಮಾಲಿನಿ, ಡಾ.ವಿಜಯ್ ಎಸ್ ಅಗಡಿ, ಶಶಿಧರ್ ಇತರರಿದ್ದಾರೆ.
ಅರಸೀಕೆರೆ ನಗರದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮೋಹನ್ ಕುಮಾರ್, ಡಾ.ಮಾಲಿನಿ, ಡಾ.ವಿಜಯ್ ಎಸ್ ಅಗಡಿ, ಶಶಿಧರ್ ಇತರರಿದ್ದಾರೆ.
Published on: 

ಅರಸೀಕೆರೆ: ಶಿಕ್ಷಕರು ಸದಾ ವಿದ್ಯಾರ್ಥಿಯಾಗಿದ್ದು, ಸೇವಾ ಅವಧಿಯನ್ನು ಸಮರ್ಥವಾಗಿ ನಿಭಾಯಿಸಲು ಯೋಜನೆ ರೂಪಿಸಬೇಕು. ಕಲಿಕೆಯ ಅವಧಿಯಲ್ಲಿ ಹೊಸ ಬಾಂಧವ್ಯ ಬೆಳೆಸಲು ಅವಕಾಶ ದೊರೆಯಲಿದೆ ಎಂದು ಹಾಸನ ಎನ್‌ಡಿಆರ್‌ಕೆ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಮೋಹನ್ ಕುಮಾರ್ ಹೇಳಿದರು.

ನಗರದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಎರಡು ವರ್ಷದ ಬಿ.ಎಡ್ ಕೋರ್ಸ್ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಲಿದೆ. ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಲಿದೆ. ವ್ಯಾಸಂಗದ ವೇಳೆ ಕಲಿಯುವ ಮತ್ತು ಕಲಿಸುವ ಮನೋಭಾವ ನಮ್ಮದಾಗಬೇಕು.ಉತ್ತಮ ಸಮಾಜ ನಿರ್ಮಾಣ ಶಿಕ್ಷಕರ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.

ಸರಳ ಜೀವನ ಉದಾತ್ತ ಚಿಂತನೆ ಮೂಲಮಂತ್ರವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಕನ್ನಡ ಕಾವ್ಯ ಪರಂಪರೆಗೆ ಬಹುದೊಡ್ಡ ಹಿನ್ನೆಲೆಯಿದೆ. ನಾಡಹಬ್ಬ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು ಎಂದು ಹೇಳಿದರು.

ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಬಿ. ಕುಡವಕ್ಕಲಗಿ ಮಾತನಾಡಿ, ವಿದ್ಯೆ ಕದಿಯಲಾರದ ಸಂಪತ್ತಾಗಿದ್ದು ಸಮಾಜಕ್ಕೆ ಸದ್ವಿನಿಯೋಗವಾಗಬೇಕು. ಗುರುವಿಗೆ ವಿಶೇಷ ಸ್ಥಾನವಿದ್ದು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕನ್ನಡಿಗರು ನವೆಂಬರ್ ಒನ್ ಮೀಸಲಾಗುವ ಬದಲು ನಂ.1 ಕನ್ನಡಿಗರಾಗಬೇಕಿದೆ. ಪ್ರಾದೇಶಿಕ ವೈವಿಧ್ಯತೆ ಜತೆಗೆ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ನೆಲ, ಜಲದ ಮಹತ್ವ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ರಾಷ್ಟ್ರೀಯ ಹಾಗೂ ನಾಡಹಬ್ಬ ಆಚರಣೆ ವೇಳೆ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಮಹತ್ವ ಎತ್ತಿಹಿಡಿಯುವ ಕೆಲಸ ಮಾಡೋಣ. ಪ್ರಶಿಕ್ಷಣಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಪ್ರಾಧ್ಯಾಪಕಿ ಡಾ.ಮಾಲಿನಿ ಮೋಹನ್ ಕುಮಾರ್, ಡಾ.ವಿಜಯ್ ಎಸ್ ಅಗಡಿ, ಗ್ರಂಥಪಾಲಕ ವಿಜಯ್ ಕುಮಾರ್, ಕಚೇರಿ ಮುಖ್ಯಸ್ಥ ಬಿ.ಆರ್. ಶಶಿಧರ್, ರೇಖಾ ಇದ್ದರು.