ಸುಧಾರಣೆ ಕಾಣದ ಹೊಗೆಸೊಪ್ಪಿನ ಧಾರಣೆ

ರೈತರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣ, ಮಾರುಕಟ್ಟೆಯತ್ತ ಬಾರದ ಜನಪ್ರತಿನಿಧಿಗಳು
ಅರಕಲಗೂಡು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕಾಗಿ ತಂದಿರುವ ಹೊಗೆಸೊಪ್ಪು ಬೇಲ್‌ಗಳು.
ಅರಕಲಗೂಡು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕಾಗಿ ತಂದಿರುವ ಹೊಗೆಸೊಪ್ಪು ಬೇಲ್‌ಗಳು.No improvement in tobacco prices
Published on: 

ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ಹೊಗೆಸೊಪ್ಪಿನ ಧಾರಣೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರಂಭದ ದಿನಗಳಲ್ಲಿ ಒಂದು ಕೆ.ಜಿ. ಉತ್ತಮ ಗುಣಮಟ್ಟದ ಹೊಗೆಸೊಪ್ಪಿಗೆ ಗರಿಷ್ಠ 270 ರೂ.ವರೆಗೆ ಬೆಲೆ ದೊರೆತಿದ್ದರೂ, ಆನಂತರ ಧಾರಣೆ ಏರಿಕೆಯಾಗದೆ ಕುಸಿತ ಕಾಣುತ್ತಿದೆ. ಕೆಲವು ಬೇಲ್‌ಗಳಿಗೆ ನೀಡಲಾಗುತ್ತಿದ್ದ ಬೆಲೆಯೂ ಕಡಿಮೆಯಾಗುತ್ತಿದೆ.

ತಂಬಾಕು ಬೆಳೆಯಲು ವರ್ಷವಿಡೀ ಅಪಾರ ಪ್ರಮಾಣದ ಹಣ, ಶ್ರಮ ಮತ್ತು ಸಮಯವನ್ನು ವ್ಯಯಿಸಿರುವ ರೈತರು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯಬಹುದೆಂಬ ನಿರೀಕ್ಷೆಯೊಂದಿಗೆ ಹೊಗೆಸೊಪ್ಪಿನ ಬೇಲ್‌ಗಳನ್ನು ಹರಾಜಿಗೆ ತರುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೆ ನಿರಾಸೆಯಿಂದ ಹಿಂದಿರುಗುವಂತಾಗಿದೆ.

ಇನ್ನು ಕೆಲವು ಬೇಲ್‌ಗಳಿಗೆ 270 ರೂ.ಗಿಂತ ಕಡಿಮೆ ಬೆಲೆ ನಿಗದಿಯಾಗುತ್ತಿದ್ದು, ಕನಿಷ್ಠ ಧಾರಣೆ 200 ರೂ.ವರೆಗೆ ಕುಸಿದಿದೆ. ಗುಣಮಟ್ಟದ ಹೊಗೆಸೊಪ್ಪು ಬೆಳೆದಿದ್ದರೂ ನಿರೀಕ್ಷಿತ ಬೆಲೆ ಸಿಗದಿರುವುದು ರೈತರನ್ನು ಕಂಗಾಲಾಗಿಸಿದೆ. ಕೆಲವು ಬೇಲ್‌ಗಳಿಗೆ ಬಿಡ್ ನಡೆಯದೆ ಹಾಗೆಯೇ ಉಳಿಯುತ್ತಿರುವುದರಿಂದ ರೈತರು ಮಾರುಕಟ್ಟೆಯಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತಮ ಧಾರಣೆ ಸಿಗಬಹುದು ಎಂಬ ಆಶಾಭಾವನೆಯಿಂದ ಮಾರುಕಟ್ಟೆಗೆ ಹೊಗೆಸೊಪ್ಪಿನ ಬೇಲ್‌ಗಳನ್ನು ತರುತ್ತಿರುವ ರೈತರಿಗೆ ನಿರೀಕ್ಷಿತ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೆಲವು ಬೇಲ್‌ಗಳನ್ನು ಹರಾಜಿನಿಂದ ಹಿಂದಕ್ಕೆ ಪಡೆದು ಮನೆಗೆ ವಾಪಸ್ ಕೊಂಡೊಯ್ಯುವಂತಾಗಿದೆ. ಈಗಾಗಲೇ ತಂಬಾಕು ಬೆಳೆಯಲು ಮಾಡಿದ ಖರ್ಚು, ಕೂಲಿ ಕಾರ್ಮಿಕರ ವೆಚ್ಚ, ಗೊಬ್ಬರ, ಔಷಧಿ ಹಾಗೂ ಸಂಸ್ಕರಣೆಯ ವೆಚ್ಚದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಮಾರುಕಟ್ಟೆಯಲ್ಲಿನ ಧಾರಣೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಂಬಾಕು ಕೃಷಿ ಸಂಪೂರ್ಣವಾಗಿ ಹವಾಮಾನ ಮತ್ತು ಮಾರುಕಟ್ಟೆ ಧಾರಣೆಯನ್ನು ಅವಲಂಬಿಸಿದ್ದು, ಬೆಳೆ ಕೈಗೆ ಬಂದ ನಂತರ ಉತ್ತಮ ಬೆಲೆ ದೊರೆಯದಿದ್ದರೆ ರೈತರು ಮಾಡಿದ ಬಂಡವಾಳವನ್ನೇ ಮರಳಿ ಪಡೆಯುವುದು ಕಷ್ಟಕರವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರವಾದ ಧಾರಣೆ ಇಲ್ಲದಿರುವುದು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ರಾಮನಾಥಪುರ ತಂಬಾಕು ಮಾರುಕಟ್ಟೆ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ರೈತರ ಸಮಸ್ಯೆ ಆಲಿಸಲು ಹಾಗೂ ಉತ್ತಮ ಧಾರಣೆ ಕೊಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮಾರುಕಟ್ಟೆಯತ್ತ ಗಮನಹರಿಸಿಲ್ಲ. ತಂಬಾಕು ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ತಂಬಾಕು ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತಮ ಬೆಲೆ ದೊರಕಿಸಿಕೊಡಲು ಪ್ರಯತ್ನಿಸಬೇಕಿತ್ತು. ಆದರೆ ಮಾರುಕಟ್ಟೆ ಆರಂಭವಾಗಿ ಇಷ್ಟು ದಿನ ಕಳೆದರೂ ರೈತರ ಸಮಸ್ಯೆಗಳ ಕುರಿತು ಯಾವುದೇ ಮಹತ್ವದ ಸ್ಪಂದನೆ ಕಂಡುಬಂದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿದಿದ್ದಾರೆ.

ಹೊಗೆಸೊಪ್ಪಿನ ಗುಣಮಟ್ಟಕ್ಕೆ ಅನುಗುಣವಾಗಿ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಬಿಡ್ ಆಗದೆ ಉಳಿಯುತ್ತಿರುವ ಬೇಲ್‌ಗಳ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಂಬಾಕು ಮಾರುಕಟ್ಟೆ ಆರಂಭವಾಗಿ ಎರಡು ವಾರ ಕಳೆದರೂ ಧಾರಣೆಯಲ್ಲಿ ಚೇತರಿಕೆ ಕಾಣದಿರುವುದು ರಾಮನಾಥಪುರ ಭಾಗದ ತಂಬಾಕು ಬೆಳೆಗಾರರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯದೆ ಹೋದರೆ ತಂಬಾಕು ಕೃಷಿಯನ್ನೇ ಮುಂದುವರಿಸುವುದು ಕಷ್ಟವಾಗಲಿದೆ ಎಂಬ ಆತಂಕವೂ ಬೆಳೆಗಾರರನ್ನು ಕಾಡುತ್ತಿದೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ರೈತರ ಸಂಕಷ್ಟಕ್ಕೆ ಸ್ಪಂದಿಸಿ ನ್ಯಾಯಯುತ ಧಾರಣೆ ದೊರಕಿಸಲು ಮುಂದಾಗಬೇಕಿದೆ.

ಯೋಗಣ್ಣ, ಗೌರವಾಧ್ಯಕ್ಷ ಜಿಲ್ಲಾ ಕಿಸಾನ್ ರೈತ ಸಂಘ