

ಅರಸೀಕೆರೆ ಗ್ರಾಮಾಂತರ: ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಸತ್ಯ-ಅಸತ್ಯದ ವಿವೇಚನೆ ಇಲ್ಲದೆ ಸಾಗುತ್ತಿರುವ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಜವಾಬ್ದಾರಿ ಮಠಗಳ ಮೇಲಿದೆ ಎಂದು ಕಣಕಟ್ಟೆ ಹೋಬಳಿ ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ಧ ಬಸವ ಶಿವಯೋಗಿಗಳ 68ನೇ, ಶ್ರೀ ಶಾಂತವೀರ ಸ್ವಾಮೀಜಿ ಅವರ 28ನೇ, ಶ್ರೀ ರಾಜಶೇಖರ ಸ್ವಾಮೀಜಿ ಅವರ 11ನೇ ವರ್ಷದ ಪುಣ್ಯ ಸ್ಮರಣೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನಿಗೆ ಪಾಂಡಿತ್ಯದ ಜತೆಗೆ ವಿವೇಚನೆ, ತಾಳ್ಮೆ ಮತ್ತು ಸಂಸ್ಕಾರ ಬಹುಮುಖ್ಯ. ಪರೋಪಕಾರ, ಸಹಕಾರ ಮನೋಭಾವ ಇದ್ದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ನಾನು ಎಂಬ ಅಹಂ ತ್ಯಜಿಸಿ ಎಲ್ಲರೂ ನಮ್ಮವರೇ ಎಂದು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾಗಿ ಜೀವನದ ಸಾರ್ಥಕತೆ ಪಡೆಯಬೇಕು ಎಂದರು.
ಕಡೂರು ತಾಲೂಕು ಯಳನಡು ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ವಿಪರೀತವಾಗಿದೆ. ಮನೆಯಲ್ಲಿ ಪಾಲಕರು ಮಕ್ಕಳು ಮೊಬೈಲ್ ಹೆಚ್ಚು ಬಳಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ತಂದೆ ತಾಯಿ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಪಾಲಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಜಿ.ದರ್ಶನ್ ಕುಮಾರ್ ಆಡಳಿತ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸೋಲು ಎಂಬುದು ಗೆಲುವಿನ ಸೋಪಾನವಾಗಬೇಕು. ಸೋಲಿಗೆ ದೃತಿಗೆಡದೆ ಸತತ ಪ್ರಯತ್ನದಿಂದ ಗೆಲುವು ಪಡೆದು ಜೀವನದ ಗುರಿ ತಲುಪಬೇಕು ಎಂದು ಹೇಳಿದರು.
ಮಠಗಳಿಗೂ, ಶಿಕ್ಷಣ ಇಲಾಖೆಗೂ ಆವಿನಾಭಾವ ಸಂಬಂಧವಿದೆ. ರಾಜ್ಯದ ಶೈಕ್ಷಣಿಕ ಕ್ರಾಂತಿಯಲ್ಲಿ ಮಠಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ತಮ್ಮ ಓದಿನ ಕಡೆ ಗಮನ ಹರಿಸಬೇಕು. ಪಾಲಕರ ಕನಸು ನನಸು ಮಾಡಬೇಕು ಎಂದರು.
ನಗರದ ಸಾವಿತ್ರಮ್ಮ ಷೆಣಸಪ್ಪ ಆಸ್ಪತ್ರೆಯ ವೈದ್ಯ ಡಾ.ಶಿವಕುಮಾರ್ ಅವರಿಗೆ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಡಾಳು ವಿರಕ್ತಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಭದ್ರಾವತಿಯ ಬಿಳಕಿ ಹಿರೇಮಠದ ಶ್ರೀ ರಾಚೂಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಕೆ. ಬಿದರೆ ದೊಡ್ಡ ಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಾಡಾಳು ಶಿವಬಸವ ಕುಮಾರಾಶ್ರಮದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಉದ್ಯಮಿ ಕೆ. ವಿ.ಎನ್.ಶಿವು, ತಿಪಟೂರು ಯೋಗೀಶ್ ಭಾಗವಹಿಸಿದ್ದರು. ಮಠದ ಆವರಣದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು.