ಬೇಲೂರು: ಯಗಚಿ ನೀರಾವರಿ ಯೋಜನೆ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೂ ಬೇಲೂರು ತಾಲೂಕಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಕ್ಷೇತ್ರದಲ್ಲಿ ನೀರಿದ್ದರೂ ತಾಲೂಕಿನ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದರು.
ಯಗಚಿ ಯೋಜನೆ ಪ್ರಾರಂಭದ ಸಂದರ್ಭ ಇದ್ದ ನೀರಾವರಿ ವ್ಯವಸ್ಥೆಯೇ ಇಂದಿಗೂ ಮುಂದುವರಿದಿದೆ. ಹಾಳಾಗಿರುವ ಕಾಲುವೆಗಳ ದುರಸ್ತಿ, ಪೈಪ್ಲೈನ್ ಬದಲಾವಣೆ, ಮೋಟಾರ್ ದುರಸ್ತಿ, ನೀರು ಸಂಗ್ರಹಿಸುವ ಅಭಿವೃದ್ಧಿಗೆ ಸಮರ್ಪಕ ಕ್ರಮಕೈಗೊಂಡಿಲ್ಲ. ಇದರಿಂದ ರೈತರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ದೊರೆಯುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತ ಪಡಿಸಿದರು.
ಯಗಚಿ ಜಲಾಶಯದಿಂದ ಹಳೇಬೀಡು ಮಾದಿಹಳ್ಳಿ ಹೋಬಳಿ ಕೆರೆಗಳಿಗೆ ಮಾತ್ರ ನೀರು ದೊರಕಿದ್ದು, ಉಳಿದಂತೆ ಬೇರೆ ಕಡೆಗೆ ನೀರಿನ ಸೌಲಭ್ಯವಿಲ್ಲ. ಬೇಲೂರಿನಲ್ಲಿ ಜಲಾಶಯವಿದ್ದರೂ ಹತ್ತಾರು ಕೆರೆಗಳು ಬರಿದಾಗಿ ಜಲಾಶಯಕ್ಕೆ ಭೂಮಿ ನೀಡಿದ ಸಾವಿರಾರು ರೈತರಿಗೆ ಅನ್ಯಾಯವಾಗಿದೆ. ಅಗತ್ಯವಿರುವೆಡೆ ಕಾಲುವೆಗಳ ದುರಸ್ತಿ ನಡೆದಿಲ್ಲ ಎಂದರು.
ಮೋಟಾರ್ ಕೆಟ್ಟಿದೆ, ಪೈಪ್ ಹಾಳಾಗಿದೆ ಎಂಬ ಕಾರಣ ಹೇಳಿ ಕಾಲಹರಣ ಮಾಡಲಾಗುತ್ತಿದೆ. ಇನ್ನೂ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸುವ ಪ್ರಯತ್ನ ನಡೆಯುತ್ತಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಕೆರೆಗಳಿಗೆ ನೀರೋದಗಿಸುವ ಯೋಜನೆಗೆ 14 ಕೆರೆ ಸೇರಿಸಿರುವುದು ಸಂತಸದ ಸಂಗತಿ. ಆದರೆ ಯೋಜನೆಯ ಉದ್ದೇಶದಂತೆ ನೀರು ತಲುಪಿಸುವ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ಕೇವಲ ಭರವಸೆಯಿಂದ ಪ್ರಯೋಜನವಿಲ್ಲ. ಯೋಜನೆಗೆ ಅಗತ್ಯವಿರುವ ಎಲ್ಲ ಅನುಮತಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಹಾಗೂ ತಾಲೂಕಿನಲ್ಲಿ ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡದೆ ರೈತರಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕ್ಷೇತ್ರದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಅಗತ್ಯ ಅನುದಾನ, ಯೋಜನೆ ಮಂಜೂರು ಮಾಡಿಸಬೇಕು. ಬೇರೆ ಕ್ಷೇತ್ರಗಳಿಗೆ ನೀರಾವರಿ ಯೋಜನೆಗಳ ಪ್ರಯೋಜನ ದೊರೆಯುತ್ತಿರುವಾಗ ಬೇಲೂರು ತಾಲೂಕನ್ನು ಕಡೆಗಣಿಸುವುದು ಸರಿಯಲ್ಲ. ತಾಲೂಕಿನ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಬೇಕು ಎಂದರು.
ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಪ್ರದೀಪ್ ಇದ್ದರು.
ಬೇಲೂರು ಕ್ಷೇತ್ರದಲ್ಲಿ ಮೂರುವರೆ ವರ್ಷದಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಬಹುತೇಕ ಹೊರಗಿನ ಗುತ್ತಿಗೆದಾರರೆ ಮಾಡುತಿದ್ದಾರೆ. ಆದರೆ ಸ್ಥಳೀಯ ಗುತ್ತಿಗೆದಾರರು ಕೆಲಸವಿಲ್ಲದೆ ನಿರ್ನಾಮವಾಗುತಿದ್ದಾರೆ. ಇದಕ್ಕೆ ಯಾರು ಕಾರಣ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇದರ ವಿರುದ್ಧ ಸ್ಥಳೀಯ ಗುತ್ತಿಗೆದಾರರು ದನಿ ಎತ್ತಬೇಕು. ಮತ್ತು ಇಲ್ಲಿನವರಿಗೆ ಯಾರೇ ಆದರೂ ಆದ್ಯತೆ ನೀಡಬೇಕು.
ಬಿ.ಶಿವರಾಂ, ಮಾಜಿ ಸಚಿವ