ಸಕಲೇಶಪುರದಲ್ಲಿ ಬಿರುಸುಗೊಂಡ ಮಳೆ

Rain intensifies in Sakaleshpura.
 ಸಕಲೇಶಪುರ ಮಳೆ ಬಿರುಸುಗೊಂಡಿದೆ
ಸಕಲೇಶಪುರ ಮಳೆ ಬಿರುಸುಗೊಂಡಿದೆ
Published on: 

ಸಕಲೇಶಪುರ: ವಾಯುಭಾರ ಕುಸಿತದಿಂದಾಗಿ ಎರಡು ದಿನಗಳಿಂದ ತಾಲೂಕಿನಲ್ಲಿ ಸೋನೆ ಮಳೆಯಾಗುತ್ತಿದ್ದು, ಶುಕ್ರವಾರ ಸಂಜೆ ಬಳಿಕ ಮಳೆ ಬಿರುಸುಗೊಂಡಿದೆ.

ಮುಂಗಾರು ಕೊರತೆಯಿಂದ ಆತಂಕದಲ್ಲಿದ್ದ ಬೆಳೆಗಾರರಲ್ಲಿ ಇದೀಗ ಕೊಂಚ ನೆಮ್ಮದಿ ಮೂಡಿಸಿದೆ. ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ನೀರಿನ ಕೊರತೆಯ ಆತಂಕ ಎದುರಾಗಿತ್ತು. ತಾಲೂಕಿನಾದ್ಯಂತ ಸುಮಾರು 2,500 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಈ ಪೈಕಿ ಸುಮಾರು 500 ಎಕರೆ ಪ್ರದೇಶಕ್ಕೆ ನೀರಿನ ಅಗತ್ಯತೆ ಹೆಚ್ಚಾಗಿತ್ತು. ಮಳೆಯ ಕೊರತೆಯಿಂದ ಭತ್ತದ ಬೆಳೆಗೆ ನೀರು ಒದಗಿಸುವುದು ಬೆಳೆಗಾರರಿಗೆ ಸವಾಲಾಗಿತ್ತು. ಇದರೊಂದಿಗೆ ಕಾಫಿ ತೋಟಗಳಲ್ಲಿಯೂ ತೇವಾಂಶದ ಕೊರತೆ ಕಂಡುಬಂದಿತ್ತು. ವಿಶೇಷವಾಗಿ ಮೆಣಸು ಬಳ್ಳಿಗಳಲ್ಲಿ ಕಾಯಿ ಕಟ್ಟುವ ಹಂತವಾಗಿರುವುದರಿಂದ ಈ ಸಂದರ್ಭದಲ್ಲಿ ತೋಟಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿತ್ತು. ಇದೀಗ ಸೆಪ್ಟೆಂಬರ್ ಅಂತ್ಯದಲ್ಲಿ ಮಳೆ ಚುರುಕುಗೊಂಡಿರುವುದು ಕಾಫಿ ಹಾಗೂ ಮೆಣಸು ಬೆಳೆಗಾರರಿಗೆ ಒಂದಷ್ಟು ಸಮಾಧಾನ ತಂದಿದೆ.

ಎರಡು ದಿನಗಳಿಂದ ತುಂತುರು ಹಾಗೂ ಸಾಧಾರಣ ಮಳೆಯಾಗುತ್ತಿದ್ದರೂ ಶುಕ್ರವಾರ ಸಂಜೆ ಬಳಿಕ ಮಳೆಯ ಬಿರುಸು ಹೆಚ್ಚಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಟಗಳು ಹಾಗೂ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗುತ್ತಿದ್ದು, ಬೆಳೆಗಳಿಗೆ ಅಗತ್ಯವಿರುವ ನೀರಿನ ಕೊರತೆ ನೀಗುವ ನಿರೀಕ್ಷೆ ಬೆಳೆಗಾರರಲ್ಲಿ ಮೂಡಿದೆ.

ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಕುರಿತು ಆತಂಕದಲ್ಲಿದ್ದ ಬೆಳೆಗಾರರಿಗೆ ಬೆಳೆಗಳ ಅಗತ್ಯದ ಸಂದರ್ಭದಲ್ಲಿ ಸುರಿಯುತ್ತಿರುವ ಮಳೆ ಆಶಾಭಾವನೆ ಮೂಡಿಸಿದೆ. ಅದರಲ್ಲೂ ಭತ್ತದ ಬೆಳೆಗೆ ನೀರಿನ ಅಗತ್ಯವಿದ್ದ ಸಂದರ್ಭ ಹಾಗೂ ಕಾಫಿ ತೋಟಗಳಲ್ಲಿ ಮೆಣಸು ಬಳ್ಳಿ ಕಾಯಿ ಕಟ್ಟುತ್ತಿರುವ ಹಂತದಲ್ಲಿ ಮಳೆ ಬಂದಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net