ಶ್ರೀಕೃಷ್ಣನನ್ನು ನಂಬಿ ಕೆಟ್ಟವರಿಲ್ಲ

ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಮತ
ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.ಶ್ರೇಯಸ್ ಎಂ.ಪಟೇಲ್, ಡಿ.ಟಿ ಶ್ರೀನಿವಾಸ್ ಇತರಿದ್ದರು.
ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.ಶ್ರೇಯಸ್ ಎಂ.ಪಟೇಲ್, ಡಿ.ಟಿ ಶ್ರೀನಿವಾಸ್ ಇತರಿದ್ದರು.
Published on: 

ಹಾಸನ : ಶ್ರೀಕೃಷ್ಣ ಆರಾಧ್ಯ ದೈವ ಎನ್ನುವುದಲ್ಲಿ ಯಾವುದೇ ತಪ್ಪಿಲ್ಲ. ಜಗತ್ತಿನಲ್ಲಿ ನಾವೆಲ್ಲ ಇರುವುದಕ್ಕೆ ಮುಖ್ಯ ಕಾರಣ ಶ್ರೀ ಕೃಷ್ಣ. ಮುರಾರಿಯನ್ನು ನಂಬಿ ಕೆಟ್ಟವರಿಲ್ಲ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಎಂತಹ ಕಷ್ಟ ಬಂದರೂ ಮೂರು ಬಾರಿ ಕೃಷ್ಣ ಎಂದರೆ ಕಷ್ಟಗಳಿಂದ ಪಾರುಗುತ್ತೇವೆ ಎಂದರು.

ಸಮಾಜದ ಒಡನಾಡಿಯಾಗಿ, ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ ಶ್ರೀನಿವಾಸ್ ಮಾತನಾಡಿ, ಸಮಾಜವನ್ನು ಕೈ ಹಿಡಿಯುವವರ ಹಿಂದೆ ಶ್ರೀಕೃಷ್ಣ ಪರಮಾತ್ಮ ಇದ್ದೇ ಇರುತ್ತಾನೆ. ಯಾದವ ಸಮುದಾಯದಲ್ಲಿ ಹುಟ್ಟಿದ ಶ್ರೀಕೃಷ್ಣ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದರೆ ಇತ್ತೀಚೆಗೆ ಶ್ರೀಕೃಷ್ಣರನ್ನು ರಾಜಕೀಯವಾಗಿ ಬಳಸಿಕೊಂಡು ಇಲ್ಲಸಲ್ಲದ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ರಾಜ್ಯದಲ್ಲಿ ಗೊಲ್ಲ ಹಾಗೂ ಯಾದವ ಸಮುದಾಯವು ಲಕ್ಷಾಂತರ ಜನರಿದ್ದಾರೆ. ಅವರಿಗೆ ಇಂದಿಗೂ ಮೂಲ ಸೌಕರ್ಯಗಳು ಸಿಕ್ಕಿಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗೆ ಒಗ್ಗಟ್ಟಿನ ಪ್ರದರ್ಶನ ಬೇಕಿದೆ. ಈ ನಿಟ್ಟಿನಲ್ಲಿ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶ್ ಗೌಡ ಮಾತನಾಡಿ, ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ರಾಮಾಯಣ, ಮಹಾಭಾರತ ಶ್ರೇಷ್ಠ ಕಾವ್ಯಗಳು. ಮಹಾಭಾರತದ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನ ಕರ್ತವ್ಯ ವಿಮುಖನಾದಾಗ, ಕೃಷ್ಣ ಬೋಧಿಸಿದ ಭಗವದ್ಗೀತೆ ಜಗತ್ತಿನ ಅತ್ಯುನ್ನತ ತತ್ವಜ್ಞಾನ ಗ್ರಂಥವಾಗಿದೆ ಎಂದರು.

ಅರಕಲಗೂಡು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಡಿ ಶಂಕರೇಗೌಡ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ,ಜಿಲ್ಲಾ ಗೊಲ್ಲ ಸಂಘದ ಅಧ್ಯಕ್ಷರಾದ ಎಚ್.ರಾಘವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಪಿ ತಾರಾನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net