ಶಿಸ್ತು ಬೆಳೆಸುವಲ್ಲಿ ಸೇವಾದಳ ಪಾತ್ರ ಪ್ರಶಂಸನೀಯ

ಉಪಪ್ರಾಂಶುಪಾಲ ಮಂಜುನಾಥ್ ಹೇಳಿಕೆ
ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರ
ನಗರದ ಆರ್.ಸಿ.ರಸ್ತೆಯ ಜಿ.ಜಿ.ಜೆ.ಸಿ (ಪ್ರಧಾನ), ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾದಳ ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು. ಮಂಜುನಾಥ್, ವಿ.ಎಸ್.ರಾಣಿ, ಕೆ.ಎನ್.ಚಿದಾನಂದ, ಎ.ವಿ.ಗೀತಾರಾಣಿ, ಎಂ.ಆರ್.ರಂಗಾಮಣಿ, ರುದ್ರೇಶ್, ಎಸ್.ಕೆ. ಪೂರ್ಣಿಮಾ ಇದ್ದರು.
Published on: 

ಹಾಸನ: ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವಲ್ಲಿ ಭಾರತ ಸೇವಾದಳದ ಪಾತ್ರ ಮಹತ್ವದ್ದಾಗಿದೆ ಎಂದು ಉಪಪ್ರಾಂಶುಪಾಲ ಮಂಜುನಾಥ್ ಹೇಳಿದರು.

ನಗರದ ಆರ್.ಸಿ.ರಸ್ತೆಯ ಜಿ.ಜಿ.ಜೆ.ಸಿ (ಪ್ರಧಾನ) ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾದಳ ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪಥಸಂಚಲನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ತೋರಿದ ಅತ್ಯುತ್ತಮ ಕವಾಯತು ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಠಿಣ ಪರಿಶ್ರಮ, ಶಿಸ್ತಿನಿಂದ ಮಾತ್ರ ಇಂತಹ ಯಶಸ್ಸು ಸಾಧ್ಯ ಎಂದರು.

ಭಾರತ ಸೇವಾದಳದ ಸಂಘಟಕಿ ವಿ.ಎಸ್.ರಾಣಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳ್ಳುವ ಶಿಸ್ತು, ಜೀವನದ ಅಂತಿಮ ಯಶಸ್ಸಿಗೆ ಬುನಾದಿಯಾಗುತ್ತದೆ. ರಾಜ್ಯ, ಜಿಲ್ಲಾ ಮಟ್ಟದ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಸಂದರ್ಭದಲ್ಲಿ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ. ನಮ್ಮ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಹೆಜ್ಜೆಹಾಕಿ ಸೇವಾದಳದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲಾ ವಿಭಾಗದ ಭಾರತ ಸೇವಾದಳದ ನೋಡಲ್ ಶಿಕ್ಷಕ ಕೆ.ಎನ್.ಚಿದಾನಂದ ಮಾತನಾಡಿ, ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ತೋರಿಸಿದ ಮುತುವರ್ಜಿ ಮತ್ತು ಶ್ರಮವನ್ನು ಶ್ಲಾಘಿಸಿದರು. ಭಾರತ ಸೇವಾದಳದವು ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿದ್ದು ಸೇವೆಯನ್ನೇ ಶ್ರೇಷ್ಠ ಧರ್ಮವೆಂದು ಪರಿಗಣಿಸಿದೆ. ಇಪ್ಪತ್ತೊಂದನೆ ಶತಮಾನದಲ್ಲಿ ಶಾಂತಿಯುತ ಬದುಕಿಗಾಗಿ, ಸಹಬಾಳ್ವೆ, ಸಾಂಘಿಕ ಬದುಕಿಗಾಗಿ ಸೇವಾದಳದ ಅಗತ್ಯವಿದೆ ಎಂದು ಹೇಳಿದರು.

ಶಿಕ್ಷಕರಾದ ಎ.ವಿ.ಗೀತಾರಾಣಿ, ಎಂ.ಆರ್.ರಂಗಾಮಣಿ, ರುದ್ರೇಶ್, ಎಸ್.ಕೆ. ಪೂರ್ಣಿಮಾ, ತೈಬಾ ಕೌಸರ್, ಚಿದಾನಂದ, ಸಂಗೀತ ಶಿಕ್ಷಕರಾದ ಬಿ.ಎನ್.ಎಸ್. ಮುರಳಿ, ಎಐ ಶಿಕ್ಷಕಿ ಅಹಲ್ಯಾ, ತರಬೇತುದಾರ ಜಿ.ಕೆ.ರಾಜೇಂದ್ರ ಉಪಸ್ಥಿತರಿದ್ದರು.