

ಚನ್ನರಾಯಪಟ್ಟಣ: ಮನುಷ್ಯನ ಅಂತ್ಯಸಂಸ್ಕಾರ ಗೌರವಯುತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಪಟ್ಟಣ ವ್ಯಾಪ್ತಿಯ ರುದ್ರಭೂಮಿಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಬಾಗೂರು ರಸ್ತೆಯ ಗೂರನಹಳ್ಳಿ ರುದ್ರಭೂಮಿಯಲ್ಲಿ ನಿರ್ಮಿಸಿರುವ ಎರಡು ಸಿಲಿಕಾನ್ ದಹನ ಛೇಂಬರ್ ಉದ್ಘಾಟಿಸಿ ಅವರು ಮಾತನಾಡಿದರು. ರುದ್ರಭೂಮಿಯಲ್ಲಿ ಮೃತದೇಹಗಳು ಸಮರ್ಪಕವಾಗಿ ದಹನವಾಗದಿರುವ ಬಗ್ಗೆ ಸೇವಾ ಸಮಿತಿಯವರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ಪಡೆದು ಎರಡು ಛೇಂಬರ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಮೃತದೇಹಗಳು ಸಂಪೂರ್ಣವಾಗಿ ದಹನವಾಗಲು ಅನುಕೂಲವಾಗಲಿದೆ. ಸಂಸ್ಥೆಯಿಂದ ಕಟ್ಟಿಗೆ ದಾಸ್ತಾನು ಶೆಡ್ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಪಟ್ಟಣದ ನಾಲ್ಕು ದಿಕ್ಕುಗಳಲ್ಲೂ ರುದ್ರಭೂಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಾಗಸಮುದ್ರ ರಸ್ತೆಯಲ್ಲಿ ಜಾಗ ಗುರುತಿಸಲಾಗಿದ್ದು, ಕೆ.ಕಾಳೇನಹಳ್ಳಿ ಬಳಿ ನಾಲ್ಕು ಎಕರೆ ಜಾಗ ಕಾಯ್ದಿರಿಸಲಾಗಿದೆ. ಡಿ.ಕಾಳೇನಹಳ್ಳಿ ರಸ್ತೆಯ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಗೂರನಹಳ್ಳಿ ರುದ್ರಭೂಮಿಯಲ್ಲಿ ದೇಹದಹನ ಸ್ಥಳಕ್ಕೆ ಶೆಲ್ಟರ್ ಹಾಗೂ ಶಾಂತಿವಾಹನ ಶೆಲ್ಟರ್ ನಿರ್ಮಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ 14 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ರುದ್ರಭೂಮಿಯಲ್ಲಿ ಮೃತದೇಹವೊಂದು ಅರ್ಧ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದನ್ನು ಶಾಸಕರ ಗಮನಕ್ಕೆ ತಂದ ತಕ್ಷಣ ನೆರವು ನೀಡಿದರು. ರುದ್ರಭೂಮಿಯ ಮುಂಭಾಗ ಶಿವನ ವಿಗ್ರಹ, ಕಾರಂಜಿ ಹಾಗೂ ಉದ್ಯಾನವನ ನಿರ್ಮಿಸಲು ಮನವಿ ಮಾಡಲಾಗಿತ್ತು. ಇದಕ್ಕಾಗಿ ಹಣ ಮಂಜೂರು ಮಾಡಿರುವ ಶಾಸಕರಿಗೆ ಸಮಿತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಸಮಿತಿ ಪದಾಧಿಕಾರಿಗಳಾದ ಸಿ.ಕೆ.ಕೃಷ್ಣ, ಸತ್ಯನಾರಾಯಣ್, ಮನೋಹರ್, ಮಹದೇವ್, ರಾಜಶೇಖರ್, ಚಂದ್ರಮೋಹನ್, ಸಿದ್ದೇಶ್, ಪುರಸಭೆ ಮಾಜಿ ಸದಸ್ಯರಾದ ಯೋಗೇಶ್, ಗಣೇಶ್, ಕವಿತಾರಾಜು, ರವಿಕುಮಾರ್, ಕೆರೆಬೀದಿ ಮಂಜುನಾಥ್, ಚಿಕ್ಕಬಿಳ್ತಿ ಗಂಗಾಧರ್ ಇತರರಿದ್ದರು.