ರಾಜ್ಯ ಸರ್ಕಾರದ ಪತನ ದೂರವಿಲ್ಲ

ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ
ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯ ಸಂವಾದ ಕಾರ್ಯಕ್ರಮವನ್ನು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಿ.ಎನ್.ಬಾಲಕೃಷ್ಣ,
ಸ್ವರೂಪ ಪ್ರಕಾಶ್, ಎ.ಮಂಜು, ಎಚ್.ಟಿ.ಮಂಜು, ನಟರಾಜ್ ಐಸಾಮಿಗೌಡ, ಪರಮದೇವರಾಜೇಗೌಡ ಇದ್ದರು.
ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯ ಸಂವಾದ ಕಾರ್ಯಕ್ರಮವನ್ನು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಿ.ಎನ್.ಬಾಲಕೃಷ್ಣ, ಸ್ವರೂಪ ಪ್ರಕಾಶ್, ಎ.ಮಂಜು, ಎಚ್.ಟಿ.ಮಂಜು, ನಟರಾಜ್ ಐಸಾಮಿಗೌಡ, ಪರಮದೇವರಾಜೇಗೌಡ ಇದ್ದರು. The fall of the state government is not far off.
Published on: 

ಚನ್ನರಾಯಪಟ್ಟಣ: ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಹೆಚ್ಚು ದಿನ ಉಳಿದಿಲ್ಲ. ರೈತರ ಕಣ್ಣೀರಿಗೆ ಕಾರಣವಾಗಿರುವ ರಾಜ್ಯದ ಸರ್ಕಾರದ ಪತನವೂ ಬಹಳ ದೂರವಿಲ್ಲ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ನಿಖಿಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತ ಸ್ವಾಭಿಮಾನ ಯಾತ್ರೆಯ ಸಂವಾದದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಲಾಶಯಗಳಲ್ಲಿ ನೀರು ಲಭ್ಯವಿದ್ದರೂ ಬೆಳೆಗಳಿಗೆ ನೀರು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಾಶಯಗಳನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ರೈತರಿಗೆ ಹೇಳುವ ಪರಿಸ್ಥಿತಿ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎದುರಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಹಣಕಾಸು ನಿರ್ವಹಣೆ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರ 4.36 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ವರ್ಷಕ್ಕೆ 48 ಸಾವಿರ ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಹಣಕಾಸು ಇಲಾಖೆಯ ಅಧಿಕೃತ ಪತ್ರದ ವಿಚಾರ ಪ್ರಸ್ತಾಪಿಸಿದ ಅವರು, ಹೊಸ ಯೋಜನೆಗಳನ್ನು ಘೋಷಿಸಬಾರದು ಎಂಬ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕಷ್ಟದಲ್ಲಿದ್ದೇವೆ ಎಂದು ಜನರು ಕಣ್ಣೀರಿಡುತ್ತಾ ಸರ್ಕಾರದ ಮುಂದೆ ಬರುತ್ತಿದ್ದಾರೆ. ಆದರೆ, ತಾಯಿ ಹೃದಯ ಸರ್ಕಾರಕ್ಕಿಲ್ಲ. ರೈತರಿಗೆ 2,500 ರೂ. ಪರಿಹಾರ ನೀಡುವುದಾಗಿ ಹೇಳಿವ ಸರ್ಕಾರದ ಕ್ರಮವನ್ನೂ ಟೀಕಿಸಿದ ಅವರು, ಸರ್ಕಾರ ನಾಡಿನ ರೈತರನ್ನು ಭಿಕ್ಷುಕರು ಎಂದುಕೊಂಡಿದೆಯೇ? ರೈತರು ಸ್ವಾಭಿಮಾನಿಗಳು. ಅವರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಸರ್ಕಾರವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣೆಯ ಕಾವು ಈಗಲೇ ಆರಂಭ: ಹಾಸನ ಜಿಲ್ಲೆಯ ಕಾರ್ಯಕರ್ತರು ಪಕ್ಷ ತೊರೆದು ಹೋಗಿಲ್ಲ ಎಂದು ಹೇಳಿದ ನಿಖಿಲ್, ಜನರು ಈಗಾಗಲೇ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆದರೆ ಈಗಾಗಲೇ ಚುನಾವಣೆಯ ಕಾವು ಆರಂಭವಾಗಿದೆ. 136 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ಬಳಿ ಸಾಲಮನ್ನಾ ಮಾಡುವಂತೆ ಮನವಿ ಮಾಡುತ್ತಿದ್ದಾರೆ ಎಂದು ಸರ್ಕಾರವನ್ನು ನಿಖಿಲ್ ಟೀಕಿಸಿದರು.

ಸಬೂಬು ಹೇಳುವುದು ಎಷ್ಟು ಸರಿ?: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡದೆ, ಹಿಂದಿನ ಸರ್ಕಾರದ ಸಾಲ ತೀರಿಸುತ್ತಿದ್ದೇವೆ ಎಂಬ ಸಬೂಬು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಪರಿಶಿಷ್ಟ ಸಮಾಜದ ಜನರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಬಸ್ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುತ್ತಿದೆ ಎಂದು ಹೇಳಿಕೊಂಡು ಮತ್ತೊಂದೆಡೆ ಬಸ್ ದರ ಹೆಚ್ಚಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ ಏಳು ಏತ ನೀರಾವರಿ ಯೋಜನೆಗಳಿಗೆ ಭೂಮಿ ನೀಡಿರುವ ರೈತರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ಪರಿಹಾರಕ್ಕಾಗಿ ರೈತರು ಮನವಿ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಇದು ಸರ್ಕಾರದ ರೈತ ವಿರೋಧಿ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.

ತೋಟಿ, ಕಲ್ಲೆಸೋಮನಹಳ್ಳಿ ಹಾಗೂ ನುಗ್ಗೆಹಳ್ಳಿ ಏತ ನೀರಾವರಿ ಯೋಜನೆಗಳಿಗಾಗಿ ಭೂಮಿ ನೀಡಿರುವ ರೈತರಿಗೆ ಸುಮಾರು 30 ಕೋಟಿ ರೂ. ಭೂಪರಿಹಾರ ಬಾಕಿ ಇದೆ. ರೈತರ ಹಿತ ಕಾಯುವ ಸಲುವಾಗಿ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಪರಿಹಾರಧನ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಯಾತ್ರೆಗೆ ರೇವಣ್ಣ, ಸೂರಜ್ ಗೈರು: ರೈತ ಸ್ವಾಭಿಮಾನ ಯಾತ್ರೆಗೆ ಶಾಸಕ ಎಚ್.ಡಿ. ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಗೈರಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಾಲೂಕಿನ ದಂಡಿಗನಹಳ್ಳಿ ಹೋಬಳಿಯನ್ನು ಪ್ರತಿನಿಧಿಸುವ ರೇವಣ್ಣ ಹಾಗೂ ಅವರ ಪುತ್ರ ಸೂರಜ್ ರೇವಣ್ಣ ಯಾತ್ರೆಗೆ ಗೈರಾಗಲು ಕಾರಣ ಸ್ಪಷ್ಟವಾಗಿಲ್ಲ.

ಶಾಸಕರಾದ ಸ್ವರೂಪ ಪ್ರಕಾಶ್, ಎ.ಮಂಜು, ಎಚ್.ಟಿ.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ನಟರಾಜ್ ಐಸಾಮಿಗೌಡ, ತಾಲೂಕು ಅಧ್ಯಕ್ಷ ಪರಮದೇವರಾಜೇಗೌಡ, ಮುಖಂಡರಾದ ಎಚ್.ಆರ್. ವೆಂಕಟೇಶಮೂರ್ತಿ, ಅನಿಲ್ ಮರಗೂರು, ಬಾಣವಾರ ಅಶೋಕ್, ಪ್ರವೀಣ್ ಕುಮಾರ್, ಸಿ.ಎನ್.ಪುಟ್ಟಸ್ವಾಮಿಗೌಡ, ಪೂಮಾಡಿಹಳ್ಳಿ ಜಗದೀಶ್, ಶಿವರಾಜ್ ರಮೇಶ್ ಕಬಾಳು, ಮಹದೇವಮ್ಮ, ವಾಸು, ರಮೇಶ್, ಬಿ.ಎಚ್.ಶಿವಣ್ಣ ರೈತರು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net