ಯಗಚಿ ಹಳೇ ಸೇತುವೆ ದುರಸ್ತಿಗೊಳಿಸಿ

ಕರವೇ ಕಾರ್ಯಕರ್ತರ ಆಗ್ರಹ
ಬೇಲೂರು: ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಐತಿಹಾಸಿಕ ಯಗಚಿ ಹಳೇ ಸೇತುವೆ ಶಿಥಿಲಾವಸ್ಥೆ ತಲುಪುತ್ತಿದೆ ಎಂದು ಆರೋಪಿಸಿ, ಕರವೇ (ನಾರಾಯಣಗೌಡ ಬಣ)ದ ಕಾರ್ಯಕರ್ತರು ಪಟ್ಟಣದ ಯಗಚಿ ಸೇತುವೆ ಬಳಿ ಶನಿವಾರ ಪ್ರತಿಭಟಿಸಿ ಶೀಘ್ರ ದುರಸ್ತಿಗೆ ಒತ್ತಾಯಿಸಿ ಗಡುವು ನೀಡಿ ತೆರಳಿದರು.
ಯಗಚಿ ಸೇತುವೆ ದುರಸ್ತಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಸೇತುವೆ ಬಳಿ ಪ್ರತಿಭಟಿಸಿದರು.
Published on: 

ಬೇಲೂರು: ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಐತಿಹಾಸಿಕ ಯಗಚಿ ಹಳೇ ಸೇತುವೆ ಶಿಥಿಲಾವಸ್ಥೆ ತಲುಪುತ್ತಿದೆ ಎಂದು ಆರೋಪಿಸಿ, ಕರವೇ (ನಾರಾಯಣಗೌಡ ಬಣ)ದ ಕಾರ್ಯಕರ್ತರು ಪಟ್ಟಣದ ಯಗಚಿ ಸೇತುವೆ ಬಳಿ ಶನಿವಾರ ಪ್ರತಿಭಟಿಸಿ ಶೀಘ್ರ ದುರಸ್ತಿಗೆ ಒತ್ತಾಯಿಸಿ ಗಡುವು ನೀಡಿ ತೆರಳಿದರು.

ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಚನ್ನಕೇಶವಸ್ವಾಮಿ ದೇವಾಲಯದಷ್ಟೇ 150 ವರ್ಷಗಳ ಇತಿಹಾಸ ಹೊಂದಿರುವ ಸೇತುವೆಯನ್ನು ಉಳಿಸುವಲ್ಲಿ ನಿರ್ಲಕ್ಷೃ ಖಂಡಿಸಿ ಹಾಗೂ ಸೇತುವೆಯ ದುರಸ್ತಿಗೆ ಆಗ್ರಹಿಸಿ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ದುರಸ್ತಿ ವಿಚಾರದಲ್ಲಿ ಪುರಸಭೆ, ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹಾಕಿಕೊಂಡ ಕಾರಣ ಸೇತುವೆ ಶಿಥಿಲಾವಸ್ಥೆ ತಲುಪುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ 2 ದಿನಗಳ ಗಡುವು ನೀಡುತ್ತಿದ್ದು, ಅಷ್ಟರೊಳಗೆ ದುರಸ್ತಿ ಕೆಲಸ ಪ್ರಾರಂಭಿಸದಿದ್ದರೆ ಸೇತುವೆ ಮೇಲೆ ವಾಹನಗಳನ್ನು ತಡೆದು ಸ್ಥಳದಲ್ಲೇ ಅಡುಗೆ ಮಾಡುವ ಮೂಲಕ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಸೇತುವೆಯ ಸುತ್ತ ಗಿಡಗಂಟಿಗಳು ಬೆಳೆದಿದ್ದರೂ ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಪ್ರತಿಭಟನೆ ನಡೆಸಿದಾಗ ಕಾಟಾಚಾರಕ್ಕೆ ಸುಣ್ಣ ಬಣ್ಣ ಬಳಿದು ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಎರಡು ಸೇತುವೆಗಳಿದ್ದರೂ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸೇತುವೆಗೆ ಶಾಶ್ವತ ದುರಸ್ತಿ ಕೈಗೊಳ್ಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಕರವೇ ತಾಲೂಕು ಗೌರವಾಧ್ಯಕ್ಷ ಕುಮಾರ್, ಜಗದೀಶ್, ಉಪಾಧ್ಯಕ್ಷ ಹನೀಪ್, ಮಾಧ್ಯಮ ವಕ್ತಾರ ದಿನೇಶ್ ಬೆಳ್ಳಾವರ, ಕಾರ್ಯದರ್ಶಿ ಪ್ರಸನ್ನ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡರಾದ ಚಂದ್ರೇಗೌಡ, ಮದನ್, ರಮೇಶ್, ಮಹೇಶ್‌ಗೌಡ, ಆನಂದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net