

ಹೊಳೆನರಸೀಪುರ: ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ರತಿ ವ್ಯಕ್ತಿ ಸ್ವಚ್ಛತಾ ಮನೋಭಾವ ಮೈಗೂಡಿಸಿಕೊಂಡರೆ ಪಟ್ಟಣವನ್ನು ಸ್ವಚ್ಛಂದವಾಗಿಸಲು ಸಾಧ್ಯ ಎಂದು ಪುರಸಭೆ ಮುಖ್ಯ ಅಧಿಕಾರಿ ಯು.ಎನ್.ಶಿವಶಂಕರ್ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಹೇಮಾವತಿ ನದಿ ತಡೆಗೋಡೆ ವಾಕಿಂಗ್ ಪಾಥ್‌ನಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಒಂದು ದಿನ ಒಂದು ಗಂಟೆ ಒಟ್ಟಾಗಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ಸ್ವಚ್ಛತೆಯಲ್ಲಿ ಸಹಭಾಗಿತ್ವ ಸ್ವಚ್ಛ ಭಾರತ ವಿಕಸಿತ ಭಾರತ ಎಂಬ ಶೀರ್ಷಿಕೆಯಡಿ ಅಭಿಯಾನವನ್ನು ಪುರಸಭೆ ವ್ಯಾಪ್ತಿಯ ಹೇಮಾವತಿ ನದಿ ತಡೆಗೋಡೆ ವಾಕಿಂಗ್ ಪಾತ್‌ನಲ್ಲಿ ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.2ರಂದು ಮಹಾತ್ಮ ಗಾಂಧೀಜಿ ಅವರ ಜಯಂತ್ಯುತ್ಸವ ಅಂಗವಾಗಿ ಇಂತಹ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ 2.4 ಅಭಿಯಾನದಡಿ ಎಲ್ಲರೂ ಸೇರಿ ಎಕ್ ದಿನ್ ಏಕ್ ಗಂಟಾ ಏಕ್ ಸಾತ್ ಎಂದು ಒಟ್ಟುಗೂಡಿ ಸ್ವಚ್ಛತಾ ಕಾರ್ಯಕ್ರಮ ಮಾಡೋಣ ಎಂದರು.
2025-2026ರಲ್ಲಿ ಕೇವಲ ಹಸಿ ಕಸ, ಒಣ ಕಸವನ್ನು ಪ್ರತ್ಯೇಕವಾಗಿ ಸಾರ್ವಜನಿಕರು ಕೊಡುತ್ತಿದ್ದರು. ಹಸಿ ಕಸ, ಒಣ ಕಸ ಪಡೆಯುವುದರ ಜತೆಗೆ ಸಾರ್ವಜನಿಕರಿಗೆ ಸ್ಯಾನಿಟರಿ ಪ್ಯಾಡ್ ನೀಡಲಾಗುವುದು. ಜತೆಗೆ ನಾಲ್ಕು ಬಗೆಯ ಕಸವನ್ನು ವಿಂಗಡಣೆ ಮಾಡಿ ಸಾರ್ವಜನಿಕರು ಕೊಡಬೇಕು ಕಸ ಸಂಗ್ರಹ ಘಟಕದಲ್ಲಿ ಪ್ರತ್ಯೇಕವಾಗಿ ಗೊಬ್ಬರ ಮಾಡಲು ಸಹಕಾರಿಯಾಗುತ್ತದೆ. ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡುವುದರಿಂದ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಕಸದಿಂದ ರಸ ಮಾಡುವ ಪ್ರಯತ್ನ ಮಾಡಬೇಕು. ಸೊಳ್ಳೆಗಳಿಂದ ಹಲವು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಬಹುದು ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ. ಆರೋಗ್ಯಕರ ವಾತಾವರಣ ಉತ್ತಮ ಪರಿಸರ ಮಾಲಿನ್ಯ ರಹಿತ ಪಟ್ಟಣವನ್ನು ರೂಪಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.
ಪುರಸಭಾ ಪರಿಸರ ಇಂಜಿನಿಯರ್ ರುಚಿ ದರ್ಶನಿ ಮಾತನಾಡಿ, ಸ್ವಚ್ಛತೆ ಎಂಬುದು ಕೇವಲ ಒಂದು ಸಮುದಾಯಕ್ಕೆ ಅಥವಾ ಒಂದು ಇಲಾಖೆಗೆ ಸೀಮಿತವಲ್ಲ. ಎಲ್ಲರೂ ಸಹಭಾಗಿತ್ವದಲ್ಲಿ ಪರಿಸರವನ್ನು ಸಂರಕ್ಷಿಸುವ ಕರ್ತವ್ಯವಾಗಬೇಕು. ನಿಮ್ಮ ಮನೆಯ ಸುತ್ತಮುತ್ತ ಹಾಗೂ ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಪುರಸಭೆ ವಾಹನದಲ್ಲಿ ಹಾಕಬೇಕು. ಮನಸೋ ಇಚ್ಛೆ ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಬಿಸಾಡಿದರೆ ಮುಲಾಜಿಲ್ಲದೆ ದಂಡ ವಿಧಿಸಬೇಕಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರು ಪರಿಸರ ಕಾಪಾಡುವುದರ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಸ್ಪೋರ್ಟ್ಸ್ ಅಂಡ್ ಗೈಡ್ಸ್ ಹಾಗೂ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೌರಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಮೂಹ ಸಂಘಟನಾ ಅಧಿಕಾರಿಗಳಾದ ರಮೇಶ್, ಪಂಕಜಾ, ಹಿರಿಯ ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಸರ್ಕಾರಿ ಕಾನೂನು ಕಾಲೇಜಿನ ಉಪನ್ಯಾಸಕ ಪ್ರತಾಪ್ ಕೆ, ಸಾಮಾಜಿಕ ಹೋರಾಟಗಾರ ಎನ್.ಆರ್.ಮುತ್ತುರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಸಂತಯ್ಯ ಡಿಕೆ, ಮೇಸ್ತ್ರಿಗಳಾದ ಕಿರಣ್, ನಾಗಮ್ಮ ಇತರರಿದ್ದರು.