

ಸಕಲೇಶಪುರ: ಮಾನವರ ನಡುವಿನ ಕಂದಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ವಿರಾಜಪೇಟೆ ತಾಲೂಕಿನ ಅರೆಮೇರಿಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಜೆಎಸ್‌ಎಸ್ ಸಂಸ್ಥೆ ಹಾಗೂ ಮಲೆನಾಡು ವೀರಶೈವ ಸಮಾಜದಿಂದ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ವಾಮೀಜಿ ಅವರ 111ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಮಾನವರ ನಡುವೆ ಪ್ರೀತಿ, ವಿಶ್ವಾಸ ಕಣ್ಮರೆಯಾದಂತೆ ಸಂಬಂಧಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಮಾನವ ಬದುಕಿರುವುದೇ ಪ್ರೀತಿಯ ನೆಲಗಟ್ಟಿನ ಮೇಲೆ. ಆದರೆ, ಇಂದು ಹಣದ ಹಿಂದೆ ಬಿದ್ದಿರುವ ಜನರಲ್ಲಿ ಪ್ರೀತಿಯ ಕುರುಹು ಇಲ್ಲದಾಗಿದೆ. ಇದು ಉತ್ತಮ ಸಮಾಜದ ಲಕ್ಷಣವಲ್ಲ ಎಂದರು.
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರೀತಿ, ಕರುಣೆಯನ್ನು ಹಂಚುವುದಕ್ಕಾಗಿ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. ಬಡವರಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಸಂಪತ್ತನ್ನು ತ್ಯಾಗಮಾಡಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಇಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ವಿಸ್ತರಿಸಿಕೊಂಡಿವೆ. ಶಿಕ್ಷಣ ನೀಡುವ ವೇಳೆ ಜಾತಿ, ಮತ ಎಣಿಸದೆ ಸ್ವಾಮೀಜಿಗಳ ಸಾಧನೆ ಅಭೂತಪೂರ್ವ. ಭೂಮಿಯ ಮೇಲೆ ಸಾಕಷ್ಟು ಹರ ಗುರುಗಳು ಜನಿಸಿದ್ದು ತಮ್ಮದೇ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಂತಹ ಸಾಧಕರ ಪಟ್ಟಿಯಲ್ಲಿ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ ಒಬ್ಬರು. ಶಿಕ್ಷಣ ಕ್ರಾಂತಿಯನ್ನು ಮಾಡಿದ ಸ್ವಾಮೀಜಿಗಳು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಶಾಸಕ ಸೀಮೆಂಟ್ ಮಂಜು, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಣ್ಣ, ಗುರುವೇಗೌಡ ಕಲ್ಯಾಣಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಬಸವಣ್ಣ, ನಾರ್ವೇ ಶಿವಪ್ರಸಾದ್, ಮಹಾಸಭಾದ ಅಧ್ಯಕ್ಷ ದಿನೇಶ್ ಸುಳ್ಳಕ್ಕಿ, ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷೆ ಕೋಮಲಾ ದಿನೇಶ್,ಓಂಕಾರಮೂರ್ತಿ, ಮಳಲಿ ಸ್ವಾಮಿ ಉಪಸ್ಥಿತರಿದ್ದರು.