ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ, ಸಾಕ್ಸ್

ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ *ಹಿಂದಿನ ವ್ಯವಸ್ಥೆ ಮುಂದುವರಿಸುವಂತೆ ಮನವಿ
 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ
ಶ್ರವಣಬೆಳಗೊಳದ ಕೆಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ನೋಟ್‌ಬುಕ್‌ಗಳನ್ನು ವಿತರಿಸಿದರು. ಎಚ್.ಎಚ್.ಸತೀಶ್, ಕೆ.ಎಲ್.ಅನಿಲ್, ಬಿ.ಕೆ.ಸತೀಶ್, ರವಿಕುಮಾರ್, ದೇವೇಂದ್ರ ಕುಮಾರ್, ಎಸ್.ವಿ.ಪುಟ್ಟರಾಜು ಇದ್ದರು.
Published on: 

ಶ್ರವಣಬೆಳಗೊಳ: ಶಾಲಾ ಮಕ್ಕಳಿಗೆ ಸರ್ಕಾರದಿಂದ ವಿತರಣೆಯಾಗುತ್ತಿರುವ ಶೂ ಮತ್ತು ಸಾಕ್ಸ್‌ನ ಗುಣಮಟ್ಟ ಹಾಗೂ ಅಳತೆಯಲ್ಲಿ ದೋಷಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಯನ್ನೇ ಮುಂದುವರಿಸುವುದು ಸೂಕ್ತ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಕ್ಕೆ ಸಲಹೆ ನೀಡಿದರು.

ಶ್ರವಣಬೆಳಗೊಳದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶ್ರೀ ಜಯದುರ್ಗಾ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಆಂಥೆಮ್ ಬಯೋಸೈನ್ಸಸ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಸಾಲಿನಲ್ಲಿ ಉತ್ತಮ ಸಂಸ್ಥೆಗಳಿಂದ ಪಾರದರ್ಶಕವಾಗಿ ಶೂ ಖರೀದಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಅಳತೆ ಹಾಗೂ ಗುಣಮಟ್ಟದ ಶೂಗಳನ್ನು ಒದಗಿಸಲಾಗಿತ್ತು. ಹಿಂದಿನ ವರ್ಷಗಳಂತೆ ಸ್ಥಳೀಯ ಮಟ್ಟದಲ್ಲೇ ಖರೀದಿಗೆ ಅವಕಾಶ ಕಲ್ಪಿಸುವ ಕುರಿತು ಶಿಕ್ಷಣ ಸಚಿವರು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಎಸ್ ಶಾಲೆ ಆವರಣದಲ್ಲಿ ಮಳೆ ನೀರು ನಿಲ್ಲುವುದು ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು.

ಇತ್ತೀಚೆಗೆ ಶಾಟ್‌ಪುಟ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕೆಪಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಲತೇಶ್‌ಗೌಡನನ್ನು ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೆ.ಎಲ್.ಅನಿಲ್, ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಬಿ.ಕೆ.ಸತೀಶ್, ರವಿಕುಮಾರ್, ದೇವೇಂದ್ರ ಕುಮಾರ್, ಎಸ್.ವಿ.ಪುಟ್ಟರಾಜು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net