ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲಿ

ಶಾಸಕ ಸಿಮೆಂಟ್ ಮಂಜು ಸಲಹೆ
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ಆಲೂರು ತಾಲೂಕು ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಜೋಸೆಫರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಕೃಷ್ಣೇಗೌಡ, ಸಿಸ್ಟರ್ ಲೀಜಿ, ಆಶಾ, ದಿವಾಕರ್, ರವಿಕಿರಣ್ ಇದ್ದರು.
Published on: 

ಆಲೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೆ ಕಾಲನಿಯ ಸಂತ ಜೋಸೆಫ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಸರೇ ಸೂಚಿಸುವಂತೆ ಪ್ರತಿಭೆ ಕಾರಂಜಿಯಂತೆ ಚಿಮ್ಮಬೇಕು. ಮಕ್ಕಳ ಪ್ರತಿಭೆಗೆ ಎಲ್ಲರೂ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಬೇಕು. ಆಸ್ತಿ, ಆಭರಣ ಎಂದೂ ಶಾಶ್ವತವಲ್ಲ. ಶಿಕ್ಷಣ ಮಾತ್ರ ಎಂದಿಗೂ ಪ್ರಜ್ವಲಿಸುತ್ತದೆ. ಬಡ ಮಕ್ಕಳಿಗೂ ದ್ವಿಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಶಿಕ್ಷಣ ಎಂದರೆ ಕೇವಲ ಓದು, ಬರಹ ಅಲ್ಲ. ಮಗುವಿನಲ್ಲಿ ಅಡಗಿರುವ ಪ್ರತಿಭೆ ಹೊರತರುವ ಪ್ರಕ್ರಿಯೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಪ್ರತಿಭೆ ಮೂಲಕ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣ ಅಷ್ಟೇ ಅಲ್ಲ ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಸಮಾಜದಲ್ಲಿ ಉತ್ತಮ ಜೀವನಕ್ಕಾಗಿ ಅನೇಕರು ಹೋರಾಟ ಮಾಡುತ್ತಾರೆ. ಆದರೆ, ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ನಾಲ್ಕು ಹೋಬಳಿಯಿಂದ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದರು.

ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಸಿಸ್ಟರ್ ಲೀಜಿ, ಮುಖ್ಯ ಶಿಕ್ಷಕಿ ಆಶಾ, ತಾಲೂಕು ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ದಿವಾಕರ್, ಶಿಕ್ಷಣ ಸಂಯೋಜಕ ರವಿಕಿರಣ್, ತಿಮ್ಮಶೆಟ್ಟರು, ಮಂಜುಳಮ್ಮ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಭಾಗವಹಿಸಿದ್ದರು.