ಬೇಲೂರು ಸಂಪೂರ್ಣ ಬರಪೀಡಿತವೆಂದು ಘೋಷಿಸಿ

ಶಾಸಕ ಎಚ್.ಕೆ. ಸುರೇಶ್ ಒತ್ತಾಯ
ಬೇಲೂರು ತಾಲೂಕಿನ ಆಂದಲೆ ಹಾಗೂ ಮುಗಳವಳ್ಳಿ, ಚಿ.ಹೊಸಳ್ಳಿ ಮತ್ತು ಕಲ್ಲಶೆಟ್ಟಿಹಳ್ಳಿ ಗ್ರಾಮಗಳ ರಸ್ತೆ ಮತ್ತು ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಇಂಜಿನಿಯರ್ ರಾಮಕೃಷ್ಣ, ಆಂದಲೆ ಹಾಗೂ ಇಬ್ಬಿಡು ಗ್ರಾಮಸ್ಥರು ಇದ್ದರು.
ಬೇಲೂರು ತಾಲೂಕಿನ ಆಂದಲೆ ಹಾಗೂ ಮುಗಳವಳ್ಳಿ, ಚಿ.ಹೊಸಳ್ಳಿ ಮತ್ತು ಕಲ್ಲಶೆಟ್ಟಿಹಳ್ಳಿ ಗ್ರಾಮಗಳ ರಸ್ತೆ ಮತ್ತು ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಇಂಜಿನಿಯರ್ ರಾಮಕೃಷ್ಣ, ಆಂದಲೆ ಹಾಗೂ ಇಬ್ಬಿಡು ಗ್ರಾಮಸ್ಥರು ಇದ್ದರು.
Published on: 

ಬೇಲೂರು: ಬೇಲೂರು ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಒತ್ತಾಯಿಸಿದರು.

ತಾಲೂಕಿನ ಆಂದಲೆ ಹಾಗೂ ಮುಗಳವಳ್ಳಿ, ಚಿ.ಹೊಸಳ್ಳಿ ಮತ್ತು ಕಲ್ಲಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ತಾಲೂಕಿನಲ್ಲಿ ಕಾಡಾನೆಗಳ ಹಾವಳಿ, ಬರಗಾಲ ಮತ್ತು ಬಿಳಿಸುಳಿ ರೋಗದಿಂದ ರೈತರು ತತ್ತರಿಸಿದ್ದಾರೆ. ಅಂಕಿ-ಅಂಶಗಳ ಸಮೇತ ಸದನದಲ್ಲಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ತಾಲೂಕನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಮತ್ತು ಪ್ರತಿ ಹೆಕ್ಟೇರ್‌ಗೆ 1 ಲಕ್ಷ ರೂ.ಸಹಾಯಧನ ನೀಡಬೇಕು. ರೈತರ 5 ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಬೇಕು. ಹಾಲಿಗೆ ಪ್ರೋತ್ಸಾಹಧನವಾಗಿ ಲೀಟರ್‌ಗೆ 10 ರೂ. ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಶೇ.100ರಷ್ಟು ಬರ ಘೋಷಣೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ರೈತರು ಮತ್ತು ಸ್ವಾಮೀಜಿಗಳ ಜತೆಗೂಡಿ ಹೋರಾಟಕ್ಕಿಳಿಯಲಿದ್ದೇನೆ ಎಂದು ಎಚ್ಚರಿಸಿದರು.

ಬಹುದಿನಗಳ ಬೇಡಿಕೆಯಂತೆ ಎತ್ತಿನಹೊಳೆ ಯೋಜನೆಯಡಿ ತಾಲೂಕಿನ ಆಂದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗಳವಳ್ಳಿಯಲ್ಲಿ 30 ಲಕ್ಷ ರೂ. ಅನುದಾನದಲ್ಲಿ 565 ಮೀಟರ್ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ, ಸಿ.ಹೊಸಳ್ಳಿ ಗ್ರಾಮದಲ್ಲಿ 2.5 ಕೋಟಿ ರೂ. ಅನುದಾನದಲ್ಲಿ ಚಾನೆಲ್ ರಿಟೈನಿಂಗ್ ವಾಲ್, ಜಂಗಲ್ ಕ್ಲಿಯರೆನ್ಸ್, 10.5 ಕಿ.ಮೀ ಸಿಲ್ಟ್ ತೆಗೆಯುವುದು, 90 ಮೀಟರ್ ರಿಟೈನಿಂಗ್ ವಾಲ್ ಹಾಗೂ 2.6 ಕಿ.ಮೀ ಜೆಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಎಚ್.ಸಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ರೈತರು ಹಾಗೂ ದನಕರುಗಳಿಗೆ ಅನುಕೂಲವಾಗಲಿದೆ. ಈ ಎಲ್ಲ ಕಾಮಗಾರಿಯ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಮಾತನಾಡಿ, ದೇವಸ್ಥಾನದ ರಸ್ತೆಗೆ 20 ಲಕ್ಷ ರೂ. ಅನುದಾನ ನೀಡಿರುವುದಕ್ಕೆ ಹಾಗೂ ಕೆರೆ ಕೋಡಿ ನೀರು ನುಗ್ಗಿ ಬೆಳೆ ನಾಶವಾಗುವುದನ್ನು ತಪ್ಪಿಸಲು 2.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಿಟೈನಿಂಗ್ ವಾಲ್ ಮತ್ತು ಚಾನೆಲ್ ಕಾಮಗಾರಿಗೆ ಸಿ.ಹೊಸಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಇಂಜಿನಿಯರ್ ರಾಮಕೃಷ್ಣ, ಆಂದಲೆ ಹಾಗೂ ಇಬ್ಬಿಡು ಗ್ರಾಮ ಪಂಚಾಯಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net