ಬಡವರಿಗೆ ಹಕ್ಕುಪತ್ರ, ನಿವೇಶನ ನೀಡಲು ಆಗ್ರಹ

ಕಲ್ಕೆರೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ
ಕಲ್ಕೆರೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ
ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿಯಿಂದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
Published on: 

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೆಹಳ್ಳಿ ಹೋಬಳಿ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮನೆ ವೃತ್ತದಲ್ಲಿರುವ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದು ಮನೆ ನಿರ್ಮಿಸಿಕೊಂಡಿರುವ ಅರ್ಹ ಬಡವರಿಗೆ ಹಕ್ಕುಪತ್ರ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಉಳಿದ ಜಮೀನನ್ನು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಕಲ್ಕೆರೆಯಿಂದ ಚನ್ನರಾಯಪಟ್ಟಣ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು.

ಕಟ್ಟೆಮನೆ ವೃತ್ತದಲ್ಲಿರುವ ಸರ್ಕಾರಿ ಜಮೀನು ಅತಿಕ್ರಮಣಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಸರ್ಕಾರಿ ಭೂಮಿ ಕೆಲವರ ಪಾಲಾಗದೆ ಬಡವರು ಹಾಗೂ ಸಾರ್ವಜನಿಕರ ಅಗತ್ಯಗಳಿಗೆ ಬಳಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜುನಾಥ್ ಒತ್ತಾಯಿಸಿದರು.

ಸರ್ಕಾರಿ ಭೂಮಿಯಲ್ಲಿ ಹೆಚ್ಚುವರಿ ಜಮೀನು ಉಳುಮೆ ಮಾಡುತ್ತಿರುವವರ ಸಮೀಕ್ಷೆ ನಡೆಸಿ, ಹೆಚ್ಚುವರಿ ಭೂಮಿಯನ್ನು ವಶಕ್ಕೆ ಪಡೆದು ಭೂರಹಿತರಿಗೆ ಹಂಚಿಕೆ ಮಾಡಬೇಕು. ಮನೆ ಕಟ್ಟಿಕೊಂಡಿರುವ ಅರ್ಹರಿಗೆ ಹಕ್ಕುಪತ್ರ, ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಕೆರೆ ಒತ್ತುವರಿ ತೆರವು ಹಾಗೂ ಬಗರ್ ಹುಕುಂ ಸಾಗುವಳಿಗೆ ಅರ್ಜಿ ಸಲ್ಲಿಸಿರುವ ಅರ್ಹರಿಗೆ ಹಕ್ಕುಪತ್ರ ನೀಡಬೇಕು. ಉಳಿದ ಜಾಗವನ್ನು ಆಸ್ಪತ್ರೆ, ಡಿಜಿಟಲ್ ಗ್ರಂಥಾಲಯ, ಸೊಸೈಟಿ, ಆಟದ ಮೈದಾನ ಮತ್ತು ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ನವೀನ್ ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ಮಾತನಾಡಿ, ಕಲ್ಕೆರೆ ಗ್ರಾಮದ ಸರ್ವೇ ನಂ.156/1ರಲ್ಲಿ 9.06 ಎಕರೆ ಸರ್ಕಾರಿ ಜಮೀನು ಇರುವುದಾಗಿ ಪಹಣಿಯಲ್ಲಿ ದಾಖಲಾಗಿದೆ. ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯವೂ ನಡೆದಿದೆ. ಈ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ 10 ಗುಂಟೆ, ಆಟದ ಮೈದಾನಕ್ಕೆ 3 ಎಕರೆ ಹಾಗೂ ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ 2 ಎಕರೆ ಮೀಸಲಿಡುವಂತೆ ಗ್ರಾಮ ಪಂಚಾಯಿತಿ ಮನವಿ ಸಲ್ಲಿಸಿದೆ. ಪಿಎಸಿಸಿ ಬ್ಯಾಂಕ್ ಹಾಗೂ ಡೇರಿ ಇರುವ ಹಿನ್ನೆಲೆಯಲ್ಲಿ ಅಗತ್ಯ ಕಟ್ಟಡಗಳಿಗೆ ಜಾಗ ಮೀಸಲಿಟ್ಟು ಉಳಿದ ಜಾಗವನ್ನು ಆಶ್ರಯ ನಿವೇಶನಕ್ಕೆ ಬಳಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, 15 ದಿನಗಳೊಳಗೆ ಸರ್ಕಾರಿ ಜಮೀನು ವಶಕ್ಕೆ ಪಡೆದು ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದರು. ಸಂಘದ ತಾಲೂಕು ಗೌರವಾಧ್ಯಕ್ಷ ಜೆ.ಎನ್.ಚಂದ್ರಹಾಸ, ಅಧ್ಯಕ್ಷ ತೇಜಸ್ ಗೌಡ, ಕಾರ್ಯದರ್ಶಿ ವಾಸುದೇವ ಕಲ್ಕೆರೆ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net