ನಿಗದಿತ ದಿನಾಂಕದಂದೇ ಜಿಪಂ, ತಾಪಂ ಚುನಾವಣೆ

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ.ಬಿ.ಖಂಡ್ರೆ ಹೇಳಿಕೆ

ಬೇಲೂರಿನಲ್ಲಿ ವೀರಶೈವ-ಲಿಂಗಾಯತ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ.ಬಿ.ಖಂಡ್ರೆ ಅವರನ್ನು ಸನ್ಮಾನಿಸಿದರು. ಅರುಣ್‌ಕುಮಾರ್, ಉಷಾ ಸತೀಶ್,ಬಿ.ಬಿ.ಶಿವರಾಜು, ವಿಕ್ರಂಕೌರಿ, ಪ್ರದೀಪ್ ಇದ್ದರು.
ಬೇಲೂರಿನಲ್ಲಿ ವೀರಶೈವ-ಲಿಂಗಾಯತ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ.ಬಿ.ಖಂಡ್ರೆ ಅವರನ್ನು ಸನ್ಮಾನಿಸಿದರು. ಅರುಣ್‌ಕುಮಾರ್, ಉಷಾ ಸತೀಶ್,ಬಿ.ಬಿ.ಶಿವರಾಜು, ವಿಕ್ರಂಕೌರಿ, ಪ್ರದೀಪ್ ಇದ್ದರು.Zilla Panchayat and Taluk Panchayat elections to be held on the scheduled date.
Published on: 

ಬೇಲೂರು: ಕ್ಷೇತ್ರ ಮರುವಿಂಗಡಣೆ ಕಾರ್ಯ ಪೂರ್ಣಗೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ನಂತರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅದರ ಆಧಾರದ ಮೇಲೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ.ಬಿ.ಖಂಡ್ರೆ ಹೇಳಿದರು.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಬುಧವಾರ ಸಂಜೆ ಬೇಲೂರಿನಲ್ಲಿ ವೀರಶೈವ-ಲಿಂಗಾಯತ ಮುಖಂಡರು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಸರ್ಕಾರ ಕಾರಣವಲ್ಲ. ಮೇಲ್ದರ್ಜೆಗೇರಿರುವ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತನೆ, ಕ್ಷೇತ್ರ ಮರು ವಿಂಗಡಣೆ ಹಾಗೂ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಸೇರಿದಂತೆ ಹಲವು ಕಾರಣಗಳಿಂದ ಚುನಾವಣಾ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗಿದೆ. ಈಗಾಗಲೇ ಹೈಕೋರ್ಟ್‌ಗೆ ಸರ್ಕಾರದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡು ಮತದಾರರ ಪಟ್ಟಿ ಲಭ್ಯವಾದ ನಂತರ ಚುನಾವಣಾ ಆಯೋಗ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು 45 ದಿನಗಳ ನಂತರ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದ್ದು, ನಿಗದಿತ ದಿನಾಂಕದಂದು ಚುನಾವಣೆ ನಡೆಯಲಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಸೋಲಿನ ಭಯದಿಂದ ಚುನಾವಣೆ ಮುಂದೂಡಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪ. ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಹಾಗೂ ತಾಪಂ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇವೆ. ಕಾನೂನು ಬಾಹಿರವಾಗಿ ಫಾರಂ ನಂ. 7 ಬಳಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಕುರಿತು ವಿಪಕ್ಷಗಳನ್ನು ಪ್ರಶ್ನಿಸಬೇಕು ಎಂದರು.

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ಸರ್ಕಾರದಿಂದ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೂ ನೇಮಕಾತಿ ಪ್ರಕ್ರಿಯೆ ಮುಂದುವರಿದಿದ್ದು, ತಮ್ಮ ಅವಧಿಯಲ್ಲಿ ಸುಮಾರು 79 ಪಿಡಿಒ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಇನ್ನೂ 149 ಪಿಡಿಒ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ನಿಯಮಾನುಸಾರ ದಾಖಲೆ ಹೊಂದಿದವರಿಗೆ ಸ್ವತ್ತು ಖಾತೆ ನೀಡಲಾಗುತ್ತಿದೆ. ಪ್ಲಾನಿಂಗ್ ಅಪ್ರೂವಲ್ ಇಲ್ಲದೆ ನಿವೇಶನ ಅಥವಾ ಮನೆ ನಿರ್ಮಿಸಿಕೊಂಡಿರುವವರಿಗೂ ನಿಯಮಾನುಸಾರ ಬಿ-ಖಾತೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸಮೀಕ್ಷೆ ನಡೆಸಿ, ಕಂದಾಯ ಇಲಾಖೆ ಸಹಕಾರ ಪಡೆಯಲಾಗುವುದು. ಗ್ರಾಮ ಠಾಣಾದಲ್ಲಿ ತಲತಲಾಂತರಗಳಿಂದ ವಾಸಿಸುತ್ತಿರುವವರಿಗೆ ಸ್ವತ್ತು ಖಾತೆ ನೀಡುವ ಕುರಿತು ಸರ್ಕಾರ ತೀರ್ಮಾನ ಕೈಗೊಂಡಿದೆ. ಸ್ಥಳ ಮಹಜರು, ಸಮೀಕ್ಷೆ ನಡೆಸಿ ಅಗತ್ಯ ದಾಖಲೆಗಳ ಪರಿಶೀಲನೆ ಬಳಿಕ ಸೇಲ್ ಡೀಡ್ ಇಲ್ಲದಿದ್ದರೂ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ಅರುಣ್‌ಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷೆ ಉಷಾ ಸತೀಶ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು, ಮುಖಂಡರಾದ ವಿಕ್ರಂಕೌರಿ, ಪ್ರದೀಪ್, ಮದನ್, ಪರಮೇಶ್, ಕರವೇ ಅಧ್ಯಕ್ಷ ಚಂದ್ರಶೇಖರ್, ಮಂಜುನಾಥ್, ಹೆಬ್ಬಾಳು ಹಾಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net