

ಚನ್ನರಾಯಪಟ್ಟಣ: ಜಾತ್ಯತೀತ ನೆಲೆಗಟ್ಟಿನ ಮೇಲೆ ದೇಶಕ್ಕೆ ಸ್ವಾತಂತ್ರೃ ದೊರಕಿಸಿ, ಸರ್ವ ಧರ್ಮೀಯರು ಸಮಾನವಾಗಿ ಬದುಕಲು ಅವಕಾಶ ಕಲ್ಪಿಸುವಲ್ಲಿ ಮಹಾತ್ಮ ಗಾಂಧಿ ಅವರ ಕೊಡುಗೆ ಅಪಾರ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದರು.
ಪ್ರತಿಯೊಂದಕ್ಕೂ ವಿದೇಶಿ ಉತ್ಪನ್ನಗಳನ್ನೇ ಅವಲಂಬಿಸುವ ಪ್ರವೃತ್ತಿಯನ್ನು ವಿರೋಧಿಸಿದ್ದ ಗಾಂಧಿ, ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಹಾಗೂ ವಿದೇಶಿ ಉತ್ಪನ್ನಗಳನ್ನು ತ್ಯಜಿಸುವಂತೆ ಕರೆ ನೀಡಿದ್ದರು. ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಗ್ರಾಮೀಣ ಜನರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹಾಗೂ ಗುಡಿ ಕೈಗಾರಿಕೆಗಳ ಉತ್ತೇಜನಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.
ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಅಳವಡಿಸಿಕೊಂಡು ಹೋರಾಟ ನಡೆಸಿದ ರಾಷ್ಟ್ರಪಿತ, ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು. ಶಿಕ್ಷಣ ತಜ್ಞ ಹಾಗೂ ತತ್ವಜ್ಞಾನಿಯಾಗಿದ್ದ ಅವರು, ದೇಶದ ಸ್ವಾತಂತ್ರೃಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಎಂದರು.
ಗಾಂಧಿ ಅವರ ಅಹಿಂಸಾ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸಬೇಕು. ಉಪ್ಪಿನ ಸತ್ಯಾಗ್ರಹ ಹಾಗೂ ಸ್ವದೇಶಿ ಚಳವಳಿ ಮೂಲಕ ಸ್ವಾತಂತ್ರೃ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ಧೀಮಂತ ನಾಯಕ ಗಾಂಧಿ ಎಂದು ಬಣ್ಣಿಸಿದರು.
ದೇಶದ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆಗೂ ಉತ್ತೇಜನ ನೀಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಚಕ ರಾಮು ಭಟ್ರು, ಪಾದ್ರಿ ಜರೋಮ್ ಮಚಾಡೋ, ಮೌಲಾನಾ ಮುನಾವರ್ ಪಾಷ ಹಾಗೂ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿದರು.
ಚನ್ನರಾಯಪಟ್ಟಣ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ.ಆರ್.ಶಿವಮೂರ್ತಿ, ಟಿಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶಮೂರ್ತಿ, ನಿರ್ದೇಶಕ ಅನಿಲ್ ಮರಗೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಲೋಕೇಶ್, ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್. ಮೂರ್ತಿ, ಶಿರಸ್ತೇದಾರ್ ಅನಿಲ್, ರಾಜನಿರೀಕ್ಷಕ ಎಂ.ಆರ್.ಮಂಜುನಾಥ್, ರೈತ ಸಂಘದ ಮುಖಂಡ ಗಿರೀಶ್, ಜಾವಿದ್ ಪಾಷಾ, ಮುಬಾಶೀರ್ ಇತರರು ಇದ್ದರು.