

ಸಕಲೇಶಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಎಸ್‌ಆರ್) ಪ್ರಕ್ರಿಯೆಯಲ್ಲಿ ಎರಡು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸದಿರುವ ಮತದಾರರು ಇನ್ನಾದರೂ ಅಗತ್ಯ ದಾಖಲೆ ಸಲ್ಲಿಸಿದರೆ ಅವರ ಹೆಸರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ಸುಪ್ರೀತಾ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶೇ.91.70 ಮತದಾರರಿಂದ ಮಾಹಿತಿ ವಾಪಸ್ ಬಂದಿದ್ದು, ಉಳಿದ ಪ್ರಕರಣಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ಪರಿಶೀಲನೆ ನಡೆಸಲಾಗಿದೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 5,436 ಮತದಾರರು ಮೃತಪಟ್ಟಿರುವುದು, 9,774 ಬೇರೆಡೆಗೆ ಸ್ಥಳಾಂತರಗೊಂಡಿರುವುದು, 1,741 ಎರಡು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವುದು ಪರಿಶೀಲನೆಯಲ್ಲಿ ಕಂಡು ಬಂದಿದೆ. 1,471 ಗೈರು ಮತದಾರರು ಹಾಗೂ ಇತರೆ 44 ಪ್ರಕರಣಗಳು ಗುರುತಿಸಲ್ಪಟ್ಟಿದ್ದು ಸುಮಾರು 18,600 ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೋ-ಮ್ಯಾಪಿಂಗ್ ವಿಭಾಗದಲ್ಲಿ 3,634 ಪ್ರಕರಣಗಳಿದ್ದು ಎರಡು ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಈವರೆಗೆ 47 ಪ್ರಕರಣಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಶಿಫಾರಸು ಮಾಡಲಾಗಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅರ್ಹತೆ ಸಾಬೀತುಪಡಿಸುವವರಿಗೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶವಿದೆ ಎಂದರು.
ಚುನಾವಣಾ ಆಯೋಗದ ಸೂಚನೆಯಂತೆ ಸದ್ಯ ವಿಚಾರಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಎರಡು ಬಾರಿ ನೋಟಿಸ್ ಪಡೆದಿದ್ದರೂ ಸ್ಪಂದಿಸದ ಮತದಾರರು ಅಗತ್ಯ ದಾಖಲೆಗಳನ್ನು ತಮ್ಮ ಬಿಎಲ್‌ಒಗಳಿಗೆ ಸಲ್ಲಿಸಬಹುದು. ಸೂಕ್ತ ದಾಖಲೆ ಒದಗಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ ಅಥವಾ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಆಲೂರು ತಹಸೀಲ್ದಾರ್ ಮಲ್ಲಿಕಾರ್ಜುನ್, ಚುನಾವಣಾ ಶಿರಸ್ತೇದಾರ್ ಜನಾರ್ದನ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.
23ರವರೆಗೆ ಕಾಲಾವಕಾಶ
ವಿಶೇಷ ಮತದಾರರ ಸಮಗ್ರ ಪರಿಷ್ಕರಣೆ ಪಟ್ಟಿಯಿಂದ ಅಂತಿಮವಾಗಿ 1,863 ಮತದಾರರು ಮತದಾರರ ಪಟ್ಟಿಯಿಂದ ಹೊರಗಿದ್ದಾರೆ ಎಂದು ತಹಸೀಲ್ದಾರ್ ಸುಪ್ರೀತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಸ್ಥಳಗಳಲ್ಲಿ ಹೆಸರು ಇರುವ ಹಾಗೂ ಮೃತಪಟ್ಟಿರುವ 18 ಸಾವಿರ ಮತದಾರರನ್ನು ಈಗಾಗಲೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ 2.13 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಸದ್ಯ ಮತದಾರರ ಸಂಖ್ಯೆ 1.86 ಲಕ್ಷಕ್ಕೆ ಇಳಿಕೆಯಾಗಿದೆ. ಮನೆಗಳಿಗೆ ತೆರಳಿದ್ದ ವೇಳೆ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ಉತ್ತರ ನೀಡದ 6,700 ಮತದಾರರಿಗೆ ನೋಟಿಸ್ ನೀಡಲಾಗಿದ್ದು ಇದರಲ್ಲಿ 4,750 ಜನರು ನೋಟಿಸ್‌ಗೆ ಉತ್ತರ ನೀಡಿದ್ದು ಇವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇನ್ನೂ 1,863 ಮತದಾರರ ಗುರುತು ಪತ್ತೆ ಹೆಚ್ಚುವ ಕೆಲಸವಾಗಬೇಕಿದೆ. ಈ ತಿಂಗಳ 23ರವರೆಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಮತಪಟ್ಟಿಗೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಕೊನೆಯ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.