

ನುಗ್ಗೇಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುರುವೇಕೆರೆ ವ್ಯಾಪ್ತಿಯಲ್ಲಿ 2 ಸಾವಿರ ಸ್ವಸಹಾಯ ಸಂಘಗಳಿಗೆ 115 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದ್ದು, ಕೃಷಿ ಚಟುವಟಿಕೆ ಹಾಗೂ ವಿವಿಧ ವ್ಯವಹಾರಗಳನ್ನು ಕೈಗೊಳ್ಳಲು ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ದಿಡಗ ವಲಯದ ನೇರಲಕೆರೆ ಗ್ರಾಮದಲ್ಲಿ ವಾತ್ಸಲ್ಯ ಯೋಜನೆ ಫಲಾನುಭವಿ ಜಯಮ್ಮ ಅವರಿಗೆ ಬುಧವಾರ ನೂತನ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ರಾಜ್ಯದಲ್ಲಿ 1,000ಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಎಂದರು.
ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಲಕ್ಷಾಂತರ ಜನರನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಿ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಮಾರ್ಗದರ್ಶನ ನೀಡಲಾಗಿದೆ. 13 ಸಾವಿರಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಹಾಗೂ 6 ಸಾವಿರ ಡೇರಿ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆಯಿಂದ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು.
ಜನಜಾಗೃತಿ ಜಿಲ್ಲಾ ನಿರ್ದೇಶಕ ಇಂದ್ರಜಿತ್ ಮಾತನಾಡಿ, ಯೋಜನೆಯ ಮೂಲಕ 6.50 ಲಕ್ಷ ಸ್ವಸಹಾಯ ಸಂಘಗಳ 55 ಲಕ್ಷ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಕುಸುಮದಾರ್, ಮೇಲ್ವಿಚಾರಕ ಹರೀಶ್, ಜಿಲ್ಲಾ ಜನಜಾಗೃತಿ ಮುಖಂಡರಾದ ತೋಟಿ ಜಯರಾಮ್, ಹೊಸಳ್ಳಿ ಮಲ್ಲೇಗೌಡ, ಸೇವಾ ಪ್ರತಿನಿಧಿ ಭವಾನಿ, ಸಮನ್ವಯಾಧಿಕಾರಿ ಭಾಗ್ಯಮ್ಮ, ಒಕ್ಕೂಟದ ಅಧ್ಯಕ್ಷೆ ಹೇಮಲತಾ, ಶಾಂತಮ್ಮ, ಲಕ್ಷ್ಮಿಗೌಡ, ಶಂಕರಲಿಂಗೇಗೌಡ, ಪಟೇಲ್ ಮಂಜುನಾಥ್, ಮುಳ್ಳುಕೆರೆ ಚೇತನ್, ಸತೀಶ್ ಇತರರಿದ್ದರು.