

ಬೇಲೂರು: ಕವಿ, ನಾಟಕಕಾರ, ರಂಗನಿರ್ದೇಶಕ ಹಾಗೂ ಸಂಶೋಧಕ ಡಾ.ಬೇಲೂರು ರಘುನಂದನ್ ಅವರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕೊಡ ಮಾಡುವ 2026ನೇ ಸಾಲಿನ ಕನಕ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಮೂಲತಃ ಬೇಲೂರಿನವರಾದ ರಘುನಂದನ್ ಅವರು ಪ್ರಸ್ತುತ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 45ಕ್ಕೂ ಹೆಚ್ಚು ನಾಟಕಗಳು, 600ಕ್ಕೂ ಹೆಚ್ಚು ರಂಗಗೀತೆಗಳನ್ನು ರಚಿಸಿದ್ದಾರೆ. ಕಾವ್ಯ, ಕಟ್ಟುಪದ, ಕಥೆ, ವಿಮರ್ಶೆ, ಸಂಶೋಧನೆ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ ಸೇರಿದಂತೆ ಸಾಹಿತ್ಯದ ವೈವಿಧ್ಯಮಯ ಪ್ರಾಕಾರಗಳಲ್ಲಿ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ ಸಾಹಿತ್ಯ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ.
ಸೃಜನಶೀಲ ರಂಗಪ್ರಯೋಗಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಕಾಲೇಜು ರಂಗಭೂಮಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದು, ರಂಗ ತರಬೇತಿ ಶಿಬಿರಗಳು, ನಾಟಕೋತ್ಸವ ಹಾಗೂ ಪ್ರಯೋಗಶೀಲರಂಗಪ್ರಸ್ತುತಿಗಳ ಮೂಲಕ ಹೊಸ ತಲೆಮಾರಿನ ರಂಗಪ್ರತಿಭೆಗಳನ್ನು ರೂಪಿಸುತ್ತಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾಖಾನ್ ರಾಷ್ಟ್ರೀಯ ಯುವ ಪುರಸ್ಕಾರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಬೇಲೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕಾಜಾಣ ಸಂಸ್ಥೆಯ ಮೂಲಕ ದಶಕಗಳಿಂದ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಂಘಟಿಸುತ್ತಿದ್ದಾರೆ.
‘ಶರ್ಮಿಷ್ಠೆ’ ನಾಟಕ ಕೃತಿಗಾಗಿ ಶಿವಮೊಗ್ಗದ ಕರ್ನಾಟಕ ಸಂಘದ ಕೆ.ವಿ.ಸುಬ್ಬಣ್ಣ ನಾಟಕ ಪ್ರಶಸ್ತಿ, ಸೇಡಂನ ಮಾತೋಶ್ರೀ ಮಹದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನದ ಅಮ್ಮ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇದೀಗ ಸಂತಕವಿ ಕನಕದಾಸರ ಕುರಿತು ಸಾಹಿತ್ಯ, ಸಂಶೋಧನೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಕೈಗೊಂಡ ಮೌಲಿಕ ಕಾರ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಕನಕ ಯುವ ಪುರಸ್ಕಾರ ನೀಡಿದೆ.