ಟ್ರಾನ್ಸ್ ಫಾರ್ಮರ್‌ಗಾಗಿ 12ರಂದು ಪ್ರತಿಭಟನೆ

ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾಹಿತಿ
ಬಳ್ಳೂರು ಸ್ವಾಮಿಗೌಡ
ಬಳ್ಳೂರು ಸ್ವಾಮಿಗೌಡ
Published on: 

ಬೇಲೂರು: ತಾಲೂಕಿನ ಗೆಂಡೇಹಳ್ಳಿ ಸಮೀಪದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೆಚ್ಚುವರಿ 20 ಎಂ.ವಿ.ಎ ವಿದ್ಯುತ್ ಪರಿವರ್ತಕ(ಟ್ರಾನ್ಸ್ ಫಾರ್ಮರ್)ಅಳವಡಿಸುವ ಕಾಮಗಾರಿ ವಿಳಂಬ ವಿರೋಧಿಸಿ ಮತ್ತು ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ದಿನಾಂಕ ಅ.12ರಂದು ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಹೇಳಿದರು.

ಗೆಂಡೇಹಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮಂಜೂರಾಗಿರುವ ಹೆಚ್ಚುವರಿ ವಿದ್ಯುತ್ ಪರಿವರ್ತಕ ಕಾಮಗಾರಿ ಪ್ರಾರಂಭಿಸ ದಿರುವುದರಿಂದ ತಾಲೂಕಿನ ತೋಳಲು, ದಬ್ಬೆ, ಸಿಂಗಾಪುರ, ಗೆಂಡೇಹಳ್ಳಿ, ಚೀಕನಹಳ್ಳಿ ಹಾಗೂ ಮೈಲಹಳ್ಳಿ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂರು ಫೀಡರ್‌ಗಳಿಗೆ ಒಂದೇ ಟ್ರಾನ್ಸ್‌ಫಾರ್ಮರ್ ಇರುವುದರಿಂದ ಓವರ್‌ಲೋಡ್ ಉಂಟಾಗಿ, ಪದೇ ಪದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಕಾಫಿ ಬೆಳೆಗಾರರು ಮತ್ತು ರೈತ ಸಂಘದ ಹೋರಾಟದ ಫಲವಾಗಿ 2025ರಲ್ಲಿ 4.81 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು. ಆದರೆ ಕಾಮಗಾರಿ ಪ್ರಾರಂಭವಾಗದಿದ್ದಾಗ ರೈತ ಸಂಘದಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗಿತ್ತು ಎಂದರು.

ಆಗ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ 15 ದಿನಗಳಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿ ಖಶಗಿ ಕಂಪನಿಗೆ ಕಾರ್ಯಾದೇಶ ನೀಡಿದ್ದರು. ಏಳು ತಿಂಗಳಿಂದ ಕಾಮಗಾರಿ ಪ್ರಾರಂಭಿಸದೆ ಕಾಲಹರಣ ಮಾಡಲಾಗುತ್ತಿದೆ. ಶಾಸಕರು ಇತ್ತ ತಿರುಗಿ ನೋಡಿಲ್ಲ ಎಂದು ಕಿಡಿಕಾರಿದರು.

ಸಂಘದ ತಾಲೂಕು ಹಸಿರು ಸೇನೆ ಅಧ್ಯಕ್ಷ ಭೂಮೇಶ್, ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ತಾರಾನಾಥ್, ಕಾರ್ಯದರ್ಶಿ ಸುರೇಶ್ ಸುದ್ಸಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net