ಜ.4ರಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ

ಟ್ರಸ್ಟ್ ಕಾರ್ಯದರ್ಶಿ ಯಮಸಂದಿ ಪಾಪಣ್ಣ
ಬೇಲೂರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬೇಲೂರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Published on: 

ಬೇಲೂರು: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವರ್ಷದ ವಾರ್ಷಿಕೋತ್ಸವವನ್ನು 2027ರ ಜನವರಿ 4, 5 ಮತ್ತು 6ರಂದು ಆಚರಿಸಲು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನಿಂದ ತೀರ್ಮಾನಿಸಲಾಗಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೈ.ಎನ್.ಕೃಷ್ಣೇಗೌಡ ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷಗಳ ಹಿಂದೆ ಭಕ್ತರ ಸಹಕಾರದಿಂದ ನಿರ್ಮಿಸಿರುವ ದೇಗುಲದಲ್ಲಿ ಪ್ರತಿವರ್ಷ ವಾರ್ಷಿಕೋತ್ಸವ ಆಚರಿಸುತ್ತಿದ್ದು ಅದರಂತೆ ಈ ಬಾರಿಯೂ ಯಶಸ್ವಿಯಾಗಿ ನಡೆಸಲು ಸಮಿತಿ ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು ಎಲ್ಲರೂ ಸಹಕಾರ ನೀಡಬೇಕು. ನಾಡಿಗೆ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಸ್ವಾಮಿಯಲ್ಲಿ ಪ್ರಾರ್ಥಿಸಲಾಗುವುದು ಎಂದರು.

ಟ್ರಸ್ಟ್ ಕಾರ್ಯದರ್ಶಿ ಯಮಸಂದಿ ಪಾಪಣ್ಣ ಮಾತನಾಡಿ, ದಕ್ಷಿಣ ಭಾರತದಲ್ಲೇ ಮಾದರಿಯಾಗಿರುವಂತ ಈ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಜ.4 ರಂದು ಚನ್ನಕೇಶವಸ್ವಾಮಿ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿಯ ಆಭರಣವನ್ನು ಮೆರವಣಿಗೆಯಲ್ಲಿ ತಂದು ಸ್ವಾಮಿಗೆ ಅರ್ಪಿಸಲಾಗುವುದು. ಜ.5,6 ರಂದು ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ ನೆರವೇರಲಿದೆ. ನಂತರ ಜ.16ರಿಂದ ಅಯ್ಯಪ್ಪನ ಮಂಡಲ ಪೂಜೆ ಮತ್ತು ವ್ರತಾಚರಣೆ ಆರಂಭವಾಗಲಿದ್ದು, ಈಗಾಗಲೇ 50ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿದ್ದಾರೆ. ಮಾಲೆ ಧರಿಸುವ ಸ್ವಾಮಿಗಳಿಗೆ, ಹೊರಗಿನ ಭಕ್ತರಿಗೆ ದೇವಸ್ಥಾನದಿಂದ ಸ್ನಾನ, ವಸತಿ, ಶೌಚಗೃಹ ಮತ್ತು ಉಚಿತ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗೌರವಾಧ್ಯಕ್ಷ ಬಿ.ಎಂ.ಸಂತೋಷ್ ಮಾತನಾಡಿ, ಬೇಲೂರಿನಲ್ಲಿ ಅಯ್ಯಪ್ಪ ಸ್ವಾಮಿ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆ ಭರದಿಂದ ಸಾಗಿದೆ. ಅಯ್ಯಪ್ಪಸ್ವಾಮಿ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸಮಿತಿ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಅಯ್ಯಪ್ಪ ಸ್ವಾಮಿಯ ಪೂಜೆ ಯಾವ ರೀತಿ ನಡೆಯುತ್ತವೆಯೋ ಅದೇ ಪರಂಪರೆಯಂತೆ ಈ ಬಾರಿಯೂ ಎಲ್ಲ ಧಾರ್ಮಿಕ ಪೂಜೆಗಳು ಜರುಗಲಿವೆ ಎಂದು ಹೇಳಿದರು.

ಉಪಾಧ್ಯಕ್ಷ ಬಳ್ಳೂರು ಉಮೇಶ್, ಗುರುಸ್ವಾಮಿ, ದೇವಿಸ್ವಾಮಿ, ಟ್ರಸ್ಟ್ ಪದಾಧಿಕಾರಿಗಳಿದ್ದರು.