

ಬೇಲೂರು: ಕಾಡಾನೆಗೆ ಬಲಿಯಾದ ಜಯಮ್ಮರ ಮೃತ ದೇಹದೊಂದಿಗೆ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಚೌಡನಹಳ್ಳಿ ಗ್ರಾಮದಲ್ಲಿ ನೂರಾರು ರೈತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಂದುವರಿಸಿದ್ದ ಪ್ರತಿಭಟನೆ ಭಾನುವಾರ ಅಂತ್ಯ ಕಂಡಿತು.
ಸ್ಥಳಕ್ಕಾಗಮಿಸಿದ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಜಿಲ್ಲಾಧಿಕಾರಿ ಲತಾಕುಮಾರಿ, ಸಿಸಿಎಫ್ ಏಡುಕೊಂಡಲು ತಿಂಗಳೊಳಗೆ ಕಾಡಾನೆಗಳನ್ನು ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆ ಸಂದರ್ಭ ಕಾಡಾನೆ ದಾಳಿಗೆ ಬಲಿಯಾದ ಜಯಮ್ಮ ಅವರ ಮೃತದೇಹದೊಂದಿಗೆ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹ್ನದವರೆಗೂ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಸಿಎಫ್ ಏಡುಕೊಂಡಲು ಮತ್ತು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಗಮಿಸಿದ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್ ಮನವೊಲಿಸಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಈ ಸಂದರ್ಭ ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಎಚ್.ಕೆ.ಸುರೇಶ್ ದೂರವಾಣಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿ ಘಟನೆಯ ವಿವರ ನೀಡಿದ್ದರಿಂದ ಮುಖ್ಯಮಂತ್ರಿಗಳು ದೂರವಾಣಿಯಲ್ಲೇ ಮಾತನಾಡಿ, ಶೀಘ್ರದಲ್ಲೆ ರೈಲ್ವೆ ಬ್ಯಾರಿಕೇಡ್ ಹಾಕಲು ಸೂಚಿಸುತ್ತೇನೆ. ಒಂದು ನಿಯೋಗದೊಂದಿಗೆ ಬೆಂಗಳೂರಿಗೆ ಬಂದರೆ ನಿಮ್ಮಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ಕೊಡುತ್ತೇನೆ. ಆದಷ್ಟು ಬೇಗ ರೈತರು, ಅಧಿಕಾರಿಗಳು, ಸಚಿವರೊಂದಿಗೆ ಸಭೆ ಮಾಡುತ್ತೇನೆ, ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ನೀವು ಯಾವತ್ತು ಸಭೆ ದಿನಾಂಕ ನಿಗದಿ ಮಾಡುತ್ತಿರೋ ಆವತ್ತೇ ಎಲ್ಲ ಅಧಿಕಾರಿಗಳೊಂದಿಗೆ ಬಂದು ಶಾಶ್ವತ ಪರಿಹಾರ ಕಲ್ಪಿಸುತ್ತೇನೆ ಎಂದು ಮನವಿ ಮಾಡಿದರೂ ಸಿಎಂ ಮನವಿಗೂ ಪ್ರತಿಭಟನಾಕಾರರು ಸ್ಪಂದಿಸಲಿಲ್ಲ.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಮೃತರ ಮನೆಯವರಿಗೆ ಇರುವಷ್ಟು ನೋವು ನಮಗೂ ಇದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಿದ್ದು ಸರ್ಕಾರದ ಗಮನಕ್ಕೂ ತಂದಿದ್ದೇವೆ. ಶನಿವಾರ ಮಧ್ಯಾಹ್ನ ಆಗಿರುವ ಘಟನೆ. ಮೃತದೇಹದ ಅಂತ್ಯ ಸಂಸ್ಕಾರ ಮಾಡಬೇಕು. ಅಂತ್ಯಸಂಸ್ಕಾರದ ನಂತರ ಮಾತನಾಡೋಣ ಎನ್ನುತ್ತಿದ್ದಂತೆ ರೈತರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿ ಬಾರಿ ಸಾವು-ನೋವಾದಾಗಲೂ ಇದನ್ನೇ ಹೇಳುತ್ತೀರಿ. ದನಗಳ ರೀತಿಯಲ್ಲಿ ಕಾಡಾನೆಗಳು ಊರು ತುಂಬ ಓಡಾಡುತ್ತಿವೆ. ನಿಮ್ಮ ಕೈಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ, ಇಲ್ಲಿಗೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬರಬೇಕೆಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.
ಸಿಸಿಎಫ್ ಮಧ್ಯ ಪ್ರವೇಶಿಸಿದ ಸಂದರ್ಭ ರೈತ ಸಂಘದ ಮುಖಂಡ ಸ್ವಾಮಿಗೌಡ, ಸಿಸಿಎಫ್ ಏಡುಕೊಂಡಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಮಸ್ಯೆ ಪರಿಹಾರವಾಗಬೇಕಾದರೆ ಸ್ಥಳಕ್ಕೆ ವೈಲ್ಡ್‌ಲೈಫ್ ಕಾರ್ಯದರ್ಶಿ ಹಾಗೂ ಅರಣ್ಯ ಮಂತ್ರಿ ಬರಬೇಕೆಂದು ಪಟ್ಟು ಹಿಡಿದರು.
ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಸಿಸಿಎಫ್ ಏಡುಕೊಂಡಲು, ಈಗಾಗಲೇ ಹಿರಿಯ ಅಧಿಕಾರಿಗಳ ಮಾತನಾಡಿದ್ದು ಅವರ ಮಾರ್ಗದರ್ಶನದಂತೆ ಇಲ್ಲಿರುವ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಆದೇಶ ಮಾಡಿದ್ದಾರೆ. ಇಲ್ಲಿರುವ ಎಲ್ಲ ಆನೆಗಳನ್ನು ಓಡಿಸಲಾಗುವುದು ಎಂದರು.
ಇಲ್ಲಿವರೆಗೆ 13 ಜನರು ಬಲಿ: ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ತಾಲೂಕಿನಲ್ಲಿ ಇಲ್ಲಿವರೆಗೆ 13 ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಆದರೆ ಜಯಮ್ಮ ಅವರ ಸಾವು ಕೊನೆಯಾಗಬೇಕು. ಮುಖ್ಯಮಂತ್ರಿಗಳು ಹೇಳಿದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಮತ್ತು ಸಿಸಿಎಫ್ ಅವರು ಸುಳ್ಳು ಹೇಳದೆ ಕಾಲವಕಾಶ ಪಡೆದು ಎಲ್ಲ ಆನೆಗಳನ್ನು ಭದ್ರಾ ಅರಣ್ಯಕ್ಕೆ ಓಡಿಸಬೇಕು. ಈಗ ಸರ್ಕಾರದಿಂದ ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಮುಂದಾಗಲಿದ್ದೇವೆ. ಈಗ ಜಯಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಮುಂದಾಗೋಣ ಎಂದು ರೈತರು, ಗ್ರಾಮಸ್ಥರ ಮನವೊಲಿಸಿದರು. ಈ ಸಂದರ್ಭ ಪ್ರತಿಭಟನೆ ಕೈಬಿಟ್ಟು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯುವುದಕ್ಕೆ ಮುಂದಾಗುವಂತೆ ತಿಳಿಸಿದರು.
ಸ್ಥಳದಲ್ಲಿ ಡಿಸಿಎಫ್ ಹರೀಶ್, ಎಸ್‌ಪಿ ಶುಭಾನ್ವಿತ, ಸಕಲೆಶಪುರ ಎಸಿ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್‌ಪಿ ಗೋಪಿ, ಪಿಐ ರೇವಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಬೋಗ ಮಲ್ಲೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಮುಖಂಡರಾದ ಅದ್ದೂರಿ ಕುಮಾರ್, ಅಮೀತ್ ಶೆಟ್ಟಿ, ಸಂಜಯ್ ಕೌರಿ, ಕುಮಾರ್ ಕೌರಿ, ಹರೀಶ್, ಕೌಶಿಕ್ ಸೇರಿದಂತೆ ನೂರಾರು ರೈತರು, ಗ್ರಾಮಸ್ಥರಿದ್ದರು.
ಇಪ್ಪತ್ತು ಲಕ್ಷ ರೂ.ಪರಿಹಾರದ ಚೆಕ್ ವಿತರಣೆ: ಮೃತ ಜಯಮ್ಮ ಅವರ ಕುಟುಂಬಕ್ಕೆ ಇಪ್ಪತ್ತು ಲಕ್ಷ ರೂ.ಪರಿಹಾರದ ಚೆಕ್ ಅನ್ನು ಶಾಸಕ ಎಚ್.ಕೆ.ಸುರೇಶ್, ಸಂಸದ ಶ್ರೇಯಸ್ ಪಟೇಲ್ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಸಿಸಿಎಫ್ ಏಡುಕೊಂಡಲು ವಿತರಿಸಿದರು. ಐದು ವರ್ಷ ಮೃತ ಜಯಮ್ಮ ಪತಿಗೆ ಸರ್ಕಾರದಿಂದ ನಾಲ್ಕು ಸಾವಿರ ಮಾಸಾಶನ ಕೊಡಿಸುವ ಭರವಸೆ ನೀಡಿದ ನಂತರ ಜಯಮ್ಮ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಎಸ್‌ಪಿ ಶುಭಾನ್ವಿತಾ ನೇತೃತ್ವದಲ್ಲಿ ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.