

ಆಲೂರು: ನಗರದ ಚಿಕ್ಕಕಣಗಾಲು ಗ್ರಾಮದಲ್ಲಿ ದಶಕಗಳ ಬೇಡಿಕೆಯಾಗಿದ್ದ ಚಿಕ್ಕಕಣಗಾಲು-ಹೊಸಳ್ಳಿ ನಡುವಿನ ಬಸ್ ಸಂಚಾರಕ್ಕೆ ಶಾಸಕ ಸಿಮೆಂಟ್ ಮಂಜು ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಈ ಮಾರ್ಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಚಿಕ್ಕಕಣಗಾಲು, ಜನ್ನಾಪುರ, ಜೆ.ತಿಮ್ಮನಹಳ್ಳಿ, ಚಿ.ಹೊಸಳ್ಳಿ ಮತ್ತು ಟಿ.ಗುಡ್ಡೇನಹಳ್ಳಿ ಹಾಗೂ ಕುಪ್ಪೆ ಹೊಸಳ್ಳಿ ಭಾಗದ ಜನರು ಆಲೂರು ಹಾಸನ ನಗರಕ್ಕೆ ಬರಲು ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಅನಿವಾರ್ಯವಾಗಿ ಮೈಲುಗಟ್ಟಲೆ ನಡಿಗೆಯಬೇಕಿತ್ತು. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದರು.
ಇದೀಗ ಸಾರಿಗೆ ಇಲಾಖೆಯ ಸಹಕಾರದಿಂದಾಗಿ ನೂತನ ಬಸ್ ಸಂಚಾರ ಆರಂಭವಾಗಿದ್ದು, ನೂರಾರು ವಿದ್ಯಾರ್ಥಿಗಳು ಹಾಗೂ ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.
ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸುವುದು ಮೊದಲ ಗುರಿ. ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಹೊಸ ಸೇವೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಲೂರು ಬಸ್ ನಿಲ್ದಾಣ ಸಂಚಾರಿ ನಿಯಂತ್ರಕ ಯು.ಬಿ ಸಿದ್ದಯ್ಯ, ಪರಮೇಶ್ವರಪ್ಪ, ಮಹೇಶ್ವರಯ್ಯ, ಚಂದ್ರಶೇಖರ, ಚಿಕ್ಕಕಣಗಾಲು ಹಾಲಿನ ಡೇರಿ ಅಧ್ಯಕ್ಷ ತೀರ್ಥ ಕುಮಾರ್, ಉಪಾಧ್ಯಕ್ಷ ಗುರು, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರೀಶ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಚಿ.ಹೊಸಹಳ್ಳಿ ಗ್ರಾಮದ ಮುಖಂಡ ಬಸವರಾಜ್, ಗ್ರಾಮಸ್ಥರಾದ ಮಂಜು, ಪ್ರಭು, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ರಘು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೋಹನ್ ಕುಮಾರ್ ಇತರರು ಇದ್ದರು.