ಗುಡಿಸಲು ತೆರವಿಗೆ ಮುದಿಗೆರೆ ಜನರ ವಿರೋಧ

ಸರ್ಕಾರಿ ಗೋಮಾಳದಲ್ಲಿ ಸ್ಥಳೀಯರ ಪ್ರತಿಭಟನೆ
ಮುದಿಗೆರೆ ಗ್ರಾಮದಲ್ಲಿ ಜೆಸಿಬಿ ತಡೆದು ಪ್ರತಿಭಟನೆ ನಡೆಸುತ್ತಿರುವವರನ್ನು ತಹಸೀಲ್ದಾರ್ ಹಾಗೂ ಇತರ  ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು.
ಮುದಿಗೆರೆ ಗ್ರಾಮದಲ್ಲಿ ಜೆಸಿಬಿ ತಡೆದು ಪ್ರತಿಭಟನೆ ನಡೆಸುತ್ತಿರುವವರನ್ನು ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು.
Published on: 

ಬೇಲೂರು: ಪಟ್ಟಣ ಸಮೀಪದ ಮುದಿಗೆರೆ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಅನಧಿಕೃತವಾಗಿ ಕೆಲವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವಿಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗುಡಿಸಲು ಹಾಗೂ ಶೀಟ್ ಮನೆಗಳನ್ನು ತೆರವು ಗೊಳಿಸಲು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭ ಮುದಿಗೆರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನಮಗೆ ಮನೆ ಇಲ್ಲ. ಇರುವ ಒಂದು ಮನೆಯಲ್ಲಿ ಮೂರು-ನಾಲ್ಕು ಕುಟುಂಬ ವಾಸವಾಗಿವೆ. ನಾವು ದಲಿತರು ಎಂದು ಹೀಗೆ ಮಾಡುತ್ತಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿ ತೆರವು ಕಾರ್ಯಚರಣೆಗೆ ಅಡ್ಡಿ ಪಡಿಸಿದ್ದರು.

5 ಎಕರೆ 16 ಗುಂಟೆ ಜಾಗದಲ್ಲಿ ಮೌಲನಾ ಆಜಾದ್ ಮಾದರಿ ಶಾಲೆಗೆ 1 ಎಕರೆ 32ಗುಂಟೆ, ಅಂಗನವಾಡಿ ಕೇಂದ್ರಕ್ಕೆ 20 ಗುಂಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕಾಗಿ 3 ಎಕರೆ 4 ಗುಂಟೆ ಮೀಸಲಿರಿಸಲಾಗಿದೆ. ಗ್ರಾಮ ಠಾಣಾದಲ್ಲಿರುವ 2 ಎಕರೆ ಜಾಗದಲ್ಲಿ ಗ್ರಾಮಸ್ಥರಿಗೆ ಕಾನೂನಿನ್ವಯ ನಿವೇಶನನ ನೀಡಲಾಗುತ್ತದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ. ಸರ್ಕಾರಿ ಜಾಗದಲ್ಲಿ ಅತಿಕ್ರಮ ಪ್ರವೇಶಿಸಿ ಗುಡಿಸಲು ನಿರ್ಮಿಸಬಾರದು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮನವರಿಕೆ ಮಾಡಲು ಯತ್ನಿಸಿದರು.

ಆದರೆ, ಇದಕ್ಕೆ ಒಪ್ಪದ ಸ್ಥಳೀಯರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಜೆಸಿಬಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಶಿವಮ್ಮ ಎಂಬ ಮಹಿಳೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಪ್ರಸಂಗವೂ ನಡೆಯಿತು. ಶ್ಯಾಮಾಲಾ ಎಂಬಾಕೆ ವಿಷ ಕುಡಿಯಲು ಯತ್ನಿಸಿದ್ದಾಗ ಪೊಲೀಸರು ತಡೆದರು. ಈ ವೇಳೆ ಶ್ಯಾಮಾಲಾ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಮೂಲಕ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಬೇಲೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಆಗಮಿಸಿ, ಗುಡಿಸಲು ಹಾಗೂ ಶೀಟ್ ಮನೆಗಳನ್ನು ತೆರವು ಗೊಳಿಸುವಂತೆ ಮನವಿ ಮಾಡಿದರು. ಛಾವಣಿಯನ್ನಾದರೂ ತೆಗೆದುಕೊಳ್ಳಿ, ಇಟ್ಟಿಗೆಗಳನ್ನು ತೆಗೆದುಕೊಳ್ಳಲು ಎರಡು ದಿನ ಸಮಯ ತೆಗೆದುಕೊಳ್ಳಿ ಎಂದರೂ ಗ್ರಾಮಸ್ಥರು ಒಪ್ಪಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ತೆರವುಗೊಳಿಸಲು ಸಾಧ್ಯವಾಗದ ಕಾರಣ ಹೆಚ್ಚಿನ ಪೊಲೀಸ್ ಬಂದುಬಸ್ತ್‌ನೊಂದಿಗೆ ಮುಂದೆ ತೆರವು ಗೊಳಿಸುತ್ತೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳ ತಂಡ ವಾಪಾಸ್ ತೆರಳಿತು.

ರಾಜಸ್ವ ನಿರೀಕ್ಷಕ ಬಾಸ್ಕರ್, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ನಂದಕುಮಾರ್, ಗ್ರಾಮಲೆಕ್ಕಿಗ ಹನುಮಂತು, ಶ್ರೀದೇವಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರಾದ ಮಹೇಶ್ವರಪ್ಪ, ರಜನಿ, ಕವಿತ, ಭಾನು, ಚಂದ್ರು, ರವಿ, ಪಾಪಣ್ಣ, ಮಂಜುನಾಥ್, ಶ್ರೀಧರ್, ಪುಟ್ಟರಾಜು, ರವಿ, ಪ್ರಸನ್ನ, ಲಲಿತ, ಮಂಜುಳಾ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net