

ಸಕಲೇಶಪುರ: ನಗರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಹೊಸ ಸ್ಕ್ಯಾನಿಂಗ್ ಯಂತ್ರ ಒದಗಿಸಿ, ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಅಗತ್ಯ ಪರೀಕ್ಷೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಶಾಸಕ ಸಿಮೆಂಟ್ ಮಂಜು ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸಚಿವರನ್ನು ಭೇಟಿ ಮಾಡಿದ ಶಾಸಕ ಸಿಮೆಂಟ್ ಮಂಜು, ಕ್ರಾಫರ್ಡ್ ಆಸ್ಪತ್ರೆಯನ್ನು ಸಕಲೇಶಪುರ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರು ಅವಲಂಭಿಸಿದ್ದಾರೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು, ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಆದರೆ ಅಗತ್ಯ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಖಾಸಗಿ ಕೇಂದ್ರಗಳೇ ಗತಿ: ವೈದ್ಯಕೀಯ ಪರೀಕ್ಷೆ ಹಾಗೂ ಮುಂದಿನ ಚಿಕಿತ್ಸೆಗೆ ಸ್ಕಾೃನಿಂಗ್ ಅಗತ್ಯವಿರುವ ರೋಗಿಗಳು ಅನಿವಾರ್ಯವಾಗಿ ಖಾಸಗಿ ಸ್ಕಾೃನಿಂಗ್ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ದೂರದ ಗ್ರಾಮೀಣ ಪ್ರದೇಶಗಳಿಂದ ಬರುವ ರೋಗಿಗಳು ಸ್ಕಾೃನಿಂಗ್‌ಗಾಗಿ ಬೇರೆಡೆ ಅಲೆದಾಡಬೇಕಾದ ಪರಿಸ್ಥಿತಿಯೂ ಇದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಮಸ್ಯೆಯನ್ನು ತುರ್ತು ಸಾರ್ವಜನಿಕ ಆರೋಗ್ಯದ ವಿಷಯವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಶೀಘ್ರವಾಗಿ ಹೊಸ ಸ್ಕಾೃನಿಂಗ್ ಯಂತ್ರವನ್ನು ಮಂಜೂರು ಮಾಡಿ ಅಳವಡಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಆರೋಗ್ಯ ಸಚಿವರನ್ನು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.