ಕಾನೂನು ಕೇವಲ ನಿಯಂತ್ರಣದ ಸಾಧನವಲ್ಲ

ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಕುಮಾರಿ ಅಭಿಪ್ರಾಯ
ಮಹಿಳಾ ಸಂಸತ್ ಕಾರ್ಯಕ್ರಮ
ಚನ್ನರಾಯಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ಸಂಸತ್ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ, ವಕೀಲೆ ವಿ.ಚಂದನಾ, ಮನೋಹರ ಉಪಸ್ಥಿತರಿದ್ದರು.
Published on: 

ಚನ್ನರಾಯಪಟ್ಟಣ: ಮನುಷ್ಯ ಜನಿಸಿದ ಕ್ಷಣದಿಂದ ಅಂತ್ಯದವರೆಗೆ ಕಾನೂನು ಆತನ ಬದುಕಿನೊಂದಿಗೆ ಬೆಸೆದುಕೊಂಡಿರುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳ ಪಾಲನೆಗೆ ಕಾನೂನು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಕುಮಾರಿ ತಿಳಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನಾಚರಣೆ ಹಾಗೂ ಮಹಿಳಾ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನನ ನೋಂದಣಿಯಿಂದ ಮರಣ ನೋಂದಣಿಯವರೆಗೆ ಕಾನೂನಿನ ಪ್ರಕ್ರಿಯೆಗಳು ಮುಂದುವರಿಯುತ್ತವೆ. ಬಾಲ್ಯದಲ್ಲಿ ಶಿಕ್ಷಣ, ಮಕ್ಕಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದ ಕಾನೂನುಗಳು ಅನ್ವಯಿಸಿದರೆ, ಪ್ರಾಪ್ತವಯಸ್ಸಿನಲ್ಲಿ ಮತದಾನ, ಉದ್ಯೋಗ, ವಿವಾಹ, ಆಸ್ತಿ ಹಾಗೂ ನಾಗರಿಕ ಜವಾಬ್ದಾರಿಗಳಿಗೆ ಸಂಬಂಧಿಸಿದ ಕಾನೂನುಗಳು ಮಹತ್ವ ಪಡೆಯುತ್ತವೆ. ಕುಟುಂಬ ಜೀವನ ಮತ್ತು ವೃದ್ಧಾಪ್ಯದಲ್ಲೂ ಆಸ್ತಿ, ವಾರಸುದಾರಿಕೆ, ಜೀವನಾಂಶ ಹಾಗೂ ಹಿರಿಯ ನಾಗರಿಕರ ರಕ್ಷಣೆಗೆ ಕಾನೂನು ನೆರವಾಗುತ್ತದೆ. ಕಾನೂನು ಕೇವಲ ನಿಯಂತ್ರಣದ ಸಾಧನವಲ್ಲ. ಅದು ಸ್ವಾತಂತ್ರ್ಯ, ಸಮಾನತೆ, ಗೌರವ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ವ್ಯವಸ್ಥೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ ಮಾತನಾಡಿ, ಮಹಿಳೆಯರ ಮೇಲಿನ ದೈಹಿಕ, ಮಾನಸಿಕ, ಲೈಂಗಿಕ ದೌರ್ಜನ್ಯ ತಡೆದು ಅವರಿಗೆ ಸುರಕ್ಷಿತ ಮತ್ತು ಗೌರವಯುತ ಬದುಕು ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮನೆ, ಕೆಲಸದ ಸ್ಥಳ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಎದುರಿಸುವ ಶೋಷಣೆ ತಡೆಗಟ್ಟಲು ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವುದರ ಜತೆಗೆ ಕಾನೂನು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ವಕೀಲೆ ವಿ.ಚಂದನಾ ಮಾತನಾಡಿ, 18 ವರ್ಷದೊಳಗಿನ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಗಾಗಿ ಜಾರಿಯಲ್ಲಿರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಮಕ್ಕಳು ತಮ್ಮ ಮೇಲಿನ ದೌರ್ಜನ್ಯ ಅಥವಾ ಶೋಷಣೆಯನ್ನು ಮೌನವಾಗಿ ಸಹಿಸದೆ ಪಾಲಕರು, ಶಿಕ್ಷಕರು, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ನೆರವು ಪಡೆಯಬೇಕು. ಹಕ್ಕುಗಳ ಅರಿವಿನೊಂದಿಗೆ ಕಾನೂನಿನ ತಿಳಿವಳಿಕೆ ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.

ಉಪನ್ಯಾಸಕ ಮನೋಹರ ಮಾತನಾಡಿ, ಮಕ್ಕಳಲ್ಲಿ ನೈತಿಕ ಶಿಕ್ಷಣ, ಶಿಸ್ತು, ಪರಸ್ಪರ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಪಠ್ಯ ಶಿಕ್ಷಣದ ಜತೆಗೆ ಹೆಣ್ಣುಮಕ್ಕಳ ಬಗ್ಗೆ ಗೌರವ, ಸಹಾನುಭೂತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬಾಲ್ಯದಿಂದಲೇ ಕಲಿಸಬೇಕು. ಮಕ್ಕಳ ಸುರಕ್ಷತೆ ಕೇವಲ ಕಾನೂನಿನ ಹೊಣೆಗಾರಿಕೆಯಲ್ಲ. ಪಾಲಕರು, ಶಿಕ್ಷಕರು ಮತ್ತು ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಚೇತನ ವಾಸು, ಉಪನ್ಯಾಸಕರಾದ ದಾಕ್ಷಾಯಿಣಿ, ಮಹೇಶ್, ಮೋಹನ್ ಕೃಷ್ಣ, ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.