

ಬೇಲೂರು: ದಿನನಿತ್ಯ ತಾಲೂಕಿನ ಒಂದಿಲ್ಲೊಂದು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ತಾಲೂಕಿನ ಕುಶಾವರ, ಕೌರಿ, ಈಚಲಹಳ್ಳಿ, ಹಿರಿಹಸಡೆ ಹಾಗೂ ಗಂಗಾವರ ಸಮೀಪದ ಮಳವಳ್ಳಿ ಭಾಗದ ತೋಟಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಕೆ, ತೆಂಗು ಸೇರಿದಂತೆ ತೋಟದಲ್ಲಿದ್ದ ಹಣ್ಣಿನ ಗಿಡಗಳನ್ನು ನಾಶ ಪಡಿಸಿದೆ.
ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಳೆದ ಐದಾರು ವರ್ಷಗಳಿಂದೀಚೆಗೆ ಸತತವಾಗಿ ಕಾಡಾನೆಗಳ ಉಪಟಳದಿಂದ ಮಲೆನಾಡು ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಅರೇಹಳ್ಳಿ ಭಾಗದಿಂದ ಕೆಲ ದಿನಗಳ ಕಾಲ ಬಿಕ್ಕೋಡು ಹೋಬಳಿಗೆ ಶಿಫ್ಟ್ ಆಗಿದ್ದ ಕಾಡಾನೆಗಳ ಹಿಂಡು, ಈಗ ಕೆಲ ದಿನಗಳ ಹಿಂದಷ್ಟೆ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಿಗೆ ಪುನಃ ಎಂಟ್ರಿ ಕೊಟ್ಟಿವೆ. ಅಲ್ಲದೆ ಎಂಟ್ರಿ ಕೊಟ್ಟಿದ್ದೆ ತಡ ಎಲ್ಲೆಂದರಲ್ಲಿ ಕಾಡಾನೆಗಳಿಂದ ಬೆಳೆ ನಾಶದಂತಹ ಘಟನೆಗಳು ಹೆಚ್ಚಾಗತೊಡಗಿರುವುದು ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಮಲೆನಾಡು ಭಾಗದ ಜಗಬೋರನಹಳ್ಳಿಯಲ್ಲಿ ಒಂದಷ್ಟು ಆನೆಗಳ ಹಿಂಡಿದ್ದರೆ, ಬೊಮ್ಮೇನಹಳ್ಳಿ, ಕೋಗೋಡು ಅರಮನೆಗುಡ್ಡ, ಐಬಿಸಿ ಎಸ್ಟೇಟ್, ಈಚಲಹಳ್ಳಿ, ಕಂಬಿದಿಣ್ಣೆ, ಕಂದಾವರ, ಹಿರಿಹಸಡೆ, ಗಂಗವಾರ ಮಳವಳಿ ಗ್ರಾಮಗಳ ಆಸುಪಾಸಿನ ಕಾಡು ಮತ್ತು ತೋಟಗಳಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಇದರ ಜತೆಗೆ ಒಂದೆರಡು ತಿಂಗಳಿಂದ ನಾಪತ್ತೆಯಾಗಿದ್ದ ಜನರ ಅಚ್ಚುಮೆಚ್ಚಿನ ದೈತ್ಯ ಗಾತ್ರದ ಭೀಮಾ ಮತ್ತೆ ಬಿಕ್ಕೋಡು ಹೋಬಳಿಯ ಕುಶಾವರ, ಕೌರಿ, ಬಕ್ರವಳ್ಳಿ ಗ್ರಾಮಗಳಲ್ಲಿ ಹಗಲಿನಲ್ಲೆ ರಾಜಾರೋಷವಾಗಿ ಮನೆಗಳ ಮುಂದೆಯೇ ಓಡಾಡುತ್ತಿರುವುದು ಮತ್ತಷ್ಟು ತಲೇ ನೋವಿಗೆ ಕಾರಣವಾಗಿದೆ.
ಇವುಗಳ ನಡುವೆ ಕಳೆದ ರಾತ್ರಿ ಹಿರಿಹಸಡೆ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ಸುಬಾನ್ ತೋಟ ಮತ್ತು ಗಂಗಾವರ ಸಮೀಪದ ಮಳವಳ್ಳಿಯಲ್ಲಿ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಸತೀಶ್ ತೋಟಕ್ಕೆ ಶುಕ್ರವಾರ ರಾತ್ರಿ ನುಗ್ಗಿರುವ 20ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಎದುರಿಗೆ ಸಿಕ್ಕ ಕಾಫಿ, ಬಾಳೆ, ಅಡಕೆ, ತೆಂಗು ಸೇರಿದಂತೆ ತೋಟದಲ್ಲಿದ್ದ ಹಣ್ಣಿನ ಗಿಡಗಳನ್ನು ಬಿಡದೆ ತಿಂದು ಹಾಕಿರುವುದಲ್ಲದೆ, ದಾರಿಯಲ್ಲಿ ಸಿಕ್ಕ ಗಿಡ ಮರಗಳನ್ನೆಲ್ಲ ಕಿತ್ತು ಬಿಸಾಕಿವೆ.
ಸಮೃದ್ದವಾಗಿ ಬೆಳೆದಿದ್ದ ಬಾಳೆಯನ್ನು ಸಂಪೂರ್ಣವಾಗಿ ತಿಂದು ಹಾಕಿದ್ದಲ್ಲದೆ, ತೆಗಿನ ಮರವನ್ನು ಬಿಡದೆ ಬೀಳಿಸಿ ಅದರ ಕುಡಿಯನ್ನು ತಿಂದು ಹಾಕಿವೆ. ಜತೆಗೆ ಕೆಲ ಆನೆಗಳು ಜನರನ್ನು ಕಂಡರೆ ಸಾಕು ಅವರ ಮೇಲೆ ದಾಳಿಗೆ ಮುಂದ್ತಾಗುತ್ತಿರುವುದರಿಂದ ಸಾರ್ವಜನಿಕರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದ್ದು, ಇನ್ನಾದರೂ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವಂತೆ ರೈತರು, ಬೆಳೆಗಾರರು, ಕಾರ್ಮಿಕರು ಸರ್ಕಾರ ಮತ್ತು ಅಧಿಕಾರಿಗಳನ್ನು ಒತ್ತಾಯಿಸುತಿದ್ದಾರೆ.
ದೂರ ಕಾಡಿಗಟ್ಟಲು ರೈತರ ಒತ್ತಾಯ: ಬರದ ನಡುವೆಯೇ ಕೆರೆ ಕಟ್ಟೆಗಳಲ್ಲಿ, ಕೊಳವೆ ಬಾವಿಗಳಲ್ಲಿ ಅಳಿದುಳಿದ ನೀರನ್ನು ಉಪಯೋಗಿಸಿ ಮಲೆನಾಡು ಭಾಗದಲ್ಲಿ ರೈತರು, ಬೆಳೆಗಾರರು ಗದ್ದೆ, ತೋಟಗಳಲ್ಲಿ ಬೆಳೆ ಬೆಳೆದಿದ್ದಾರೆ. ಆದರೆ ಕಾಡಾನೆಗಳ ಉಪಟಳಕ್ಕೆ ಬೆಳೆ ನಾಶವಾಗುತ್ತಿರುವುದರಿಂದ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದಂತಾಗುತಿದೆ ಎಂಬ ಅಳಲು ತೋಡಿಕೊಳ್ಳುತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಡಾನೆಗಳನ್ನು ದೂರದ ಕಾಡಿಗಟ್ಟುವಂತ್ತೆ ರೈತರು ಒತ್ತಾಯಿಸಿದ್ದಾರೆ.
ತಾಲೂಕಿನ ಜಗಬೋರನಹಳ್ಳಿ ಸಮೀಪ 35 ಕಾಡಾನೆಗಳು ಹಾಗೂ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ 18ಕ್ಕೂ ಹೆಚ್ಚು ಕಾಡಾನೆಗಳಿದ್ದು, ಕಳೆದ ರಾತ್ರಿ ಮಳವಳ್ಳಿ, ಹಿರಿಹಸಡೆ ಸೇರಿದಂತೆ ಇತರ ಗ್ರಾಮಗಳಲ್ಲಿ ಬೆಳೆ ನಾಶ ಪಡಿಸಿವೆ. ಬೆಳೆ ನಾಶವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಕೈಗೊಳ್ಳಲಿದ್ದೇವೆ. ಜತೆಗೆ ಆನೆಗಳನ್ನು ಕಾಡಿನತ್ತ ಓಡಿಸಲು ನಮ್ಮ ಸಿಬ್ಬಂದಿ ಮುಂದಾಗಲಿದ್ದಾರೆ.
ಯತೀಶ್, ವಲಯ ಅರಣ್ಯಾಧಿಕಾರಿ ಬೇಲೂರು