ಕಬಡ್ಡಿ ವಿಜಯಪುರ ತಂಡ ಚಾಂಪಿಯನ್

ಎರಡು ದಿನಗಳ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಕ್ರೀಡಾಕೂಟ
ಚನ್ನರಾಯಪಟ್ಟಣ: ತಾಲೂಕಿನ ನವೋದಯ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಜಯಪುರ ತಂಡದ ಆಟಗಾರರು ಹಾಗೂ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
Published on: 

ಚನ್ನರಾಯಪಟ್ಟಣ: ತಾಲೂಕಿನ ನವೋದಯ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕರ ಕಚೇರಿ, ಹಾಸನ ಹಾಗೂ ಚನ್ನರಾಯಪಟ್ಟಣದ ನವೋದಯ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 33 ತಂಡಗಳು ಭಾಗವಹಿಸಿದ್ದವು.

ಅಂತಿಮ ಹಣಾಹಣಿಯಲ್ಲಿ ವಿಜಯಪುರ ಜಿಲ್ಲೆಯ ತಂಡ ಬೆಂಗಳೂರು ದಕ್ಷಿಣ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ 40-5 ಅಂಕಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ವಿಜಯಪುರ ತಂಡ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ತಂಡ ಮೂರನೇ ಹಾಗೂ ರಾಯಚೂರು ತಂಡ ನಾಲ್ಕನೇ ಸ್ಥಾನ ಪಡೆದುಕೊಂಡವು.

ವೈಯಕ್ತಿಕ ವಿಭಾಗದಲ್ಲಿ ಬೆಳಗಾವಿ ತಂಡದ ಉಮೇಶ್ ಕರಿಕಟ್ಟಿ ಉತ್ತಮ ರೈಡರ್ ಪ್ರಶಸ್ತಿಗೆ ಭಾಜನರಾದರೆ, ವಿಜಯಪುರ ತಂಡದ ವಿವೇಕ್ ಲಂಬಾಣಿ ಉತ್ತಮ ಕ್ಯಾಚರ್ ಪ್ರಶಸ್ತಿ ಪಡೆದರು. ವಿಜಯಪುರ ತಂಡದ ನಾಯಕ ಸಂದೀಪ್ ಚೌಹಾನ್ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಆಟಗಾರರಿಗೆ ಒಂದು ವಾರ ವಿಶೇಷ ತರಬೇತಿ ನೀಡಿ ಮುಂದಿನ ಹಂತದ ಪಂದ್ಯಾವಳಿಗೆ ಕಳುಹಿಸಿಕೊಡಲಾಗುವುದು ಎಂದು ಶಿವ ಮಾದೇಶ್ ತಿಳಿಸಿದರು.

33 ತಂಡಗಳ ನಡುವೆ ಪೈಪೋಟಿ:

ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳ ಆಟಗಾರರು ಅತ್ಯುತ್ತಮ ಕ್ರೀಡಾಸ್ಫೂರ್ತಿ ಹಾಗೂ ಪ್ರತಿಭೆ ಪ್ರದರ್ಶಿಸಿದರು. ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿವಿಧ ತಂಡಗಳ ಪ್ರತಿನಿಧಿಗಳು, ನವೋದಯ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.

ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಕ್ರೀಡಾಕೂಟದ ಜಿಲ್ಲಾ ಸಂಯೋಜಕ ವಿಜಯ ಶಶಿ, ರಾಜ್ಯ ಕ್ರೀಡಾ ಸಂಯೋಜಕ ಗೋಪಾಲಕೃಷ್ಣ, ವೀಕ್ಷಣಾಧಿಕಾರಿಗಳಾದ ಕುಮಾರ್ ನಾಯಕ್, ಮಲ್ಲಿಕಾರ್ಜುನ್, ಬಾಳಪ್ಪ ನಾಯಕ್, ಒ.ಆರ್. ರಂಗೇಗೌಡ, ಭೋಜೇಗೌಡ, ಗೌರವಾಧ್ಯಕ್ಷ ಡಾ. ಶೇಷಶಯನ, ಅಧ್ಯಕ್ಷ ಸಿ.ಜೆ.ಮಂಜುನಾಥ್, ವೈದ್ಯಕೀಯ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲ ಡಿ.ಎಲ್.ಅರುಣ್ ಕುಮಾರ್, ಸಮಾಜಸೇವಕ ರಾಜಕುಮಾರ್, ಉಪಾಧ್ಯಕ್ಷ ಡಾ.ಎಸ್.ಪ್ರಮೋದ್, ಕಾರ್ಯದರ್ಶಿ ಜಲೇಂದ್ರ ಕುಮಾರ್, ಖಜಾಂಚಿ ಎಂ.ಎನ್.ಸಂತೋಷ್, ನಿರ್ದೇಶಕರಾದ ಕೆ.ಆರ್.ಶಿವಕುಮಾರ್, ಕೆ.ಪಿ.ಶರತ್, ಆನಂದ್ ಕಾಳೇನಹಳ್ಳಿ, ಸಿ.ಟಿ.ಕುಮಾರಸ್ವಾಮಿ, ಗೋವಿಂದರಾಜು, ಜೆ.ಕೆ.ರಾಘವೇಂದ್ರ, ಆದರ್ಶ, ಸಿ.ಸಿ. ವಿಜಯ್, ಕೃಷ್ಣಮೂರ್ತಿ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.