

ಸಕಲೇಶಪುರ: ತಾಲೂಕಿನ ಮೊಗನಹಳ್ಳಿ ಗ್ರಾಮದಲ್ಲಿರುವ ಎತ್ತಿನಹೊಳೆ ಯೋಜನೆಯ ಪಂಪ್ಹೌಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಪಂಪ್ಹೌಸ್ನಲ್ಲಿ ಯಂತ್ರೋಪಕರಣಗಳು ಬೆಂಕಿಗಾಹುತಿಯಾಗಿವೆ. ಸ್ಥಳದಲ್ಲಿದ್ದ ಮೂವರು ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂಪ್ಹೌಸ್ನಲ್ಲಿ ಮಂಗಳವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಬೆಲೆ ಬಾಳುವ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ದುರಂತ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಮೂವರು ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡು ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆಯ ಪ್ರಮುಖ ಘಟಕವಾಗಿರುವ ಪಂಪ್ಹೌಸ್ನಲ್ಲಿ ಸಂಬಂಧಪಟ್ಟ ಇಂಜಿನಿಯರ್ಗಳು ಸ್ಥಳದಲ್ಲಿದ್ದು ನಿರಂತರ ಮೇಲ್ವಿಚಾರಣೆ ನಡೆಸಬೇಕಿತ್ತು. ಸ್ಥಳದಲ್ಲಿ ಇಂಜಿನಿಯರ್ಗಳ ಗೈರುಹಾಜರಿ ಹಾಗೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಂಪ್ಹೌಸ್ನಲ್ಲೇ ದುರಂತ ಸಂಭವಿಸಿರುವುದು ಯೋಜನೆಯ ಸುರಕ್ಷತೆ ಮತ್ತು ನಿರ್ವಹಣಾ ವ್ಯವಸ್ಥೆಯ ಬಂಡವಾಳ ಬಯಲು ಮಾಡಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಘಟನೆಗೆ ನಿಖರ ಕಾರಣ ಪತ್ತೆ ಮಾಡಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.