

ಚನ್ನರಾಯಪಟ್ಟಣ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ಹಾಸನ ಜಿಲ್ಲಾ ಸಂಸ್ಥೆ ಹಾಗೂ ಚನ್ನರಾಯಪಟ್ಟಣ ತಾಲೂಕು ಸಂಸ್ಥೆ ಸಹಯೋಗದಲ್ಲಿ 46ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವ ಅ.3ರಿಂದ 6ರವರೆಗೆ ಶ್ರವಣಬೆಳಗೊಳದಲ್ಲಿ ಜರುಗಲಿದೆ ಎಂದು ಶಾಸಕ ಡಾ.ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಉತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಮಕ್ಕಳು, ಸ್ಕೌಟ್ಸ್-ಗೈಡ್ ಶಿಕ್ಷಕರು, ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸಹಕಾರ ಮನೋಭಾವ ಬೆಳೆಸುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ. ಮಕ್ಕಳಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, ಉತ್ಸವದಲ್ಲಿ ಸಾಹಸ ಚಟುವಟಿಕೆ, ಹೊರ ಸಂಚಾರ, ಶೈಕ್ಷಣಿಕ ಸ್ಥಳಗಳ ವೀಕ್ಷಣೆ, ಆಟೋಟ, ಶಿಬಿರಾಗ್ನಿ, ಪ್ರಕೃತಿ ಅಧ್ಯಯನ, ಕರಕುಶಲ ಚಟುವಟಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ. ಶ್ರವಣಬೆಳಗೊಳದ ಐತಿಹಾಸಿಕ ಹಿನ್ನೆಲೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಪುಟ್ಟ ಮನಸ್ಸು, ದೊಡ್ಡ ಕನಸು ಆಶಯದಡಿ ಉತ್ಸವ ರೂಪಿಸಲಾಗಿದೆ. ಮಕ್ಕಳಿಗೆ ಶಿಬಿರ ಜೀವನದ ಅನುಭವ ನೀಡುವುದರ ಜತೆಗೆ ಅವರಲ್ಲಿರುವ ಪ್ರತಿಭೆ ಹಾಗೂ ಕೌಶಲ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು ಎಂದರು.
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಆಶೀರ್ವಾದ, ಶಾಸಕ ಡಾ.ಸಿ.ಎನ್.ಬಾಲಕೃಷ್ಣ ಅವರ ಸಹಕಾರ ಹಾಗೂ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್.ಸಿಂಧ್ಯಾ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದೆ. ಉತ್ಸವದ ಯಶಸ್ಸಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ಭಾರತಿ ನಾಗೇಶ್, ಕಬ್ಬಾಳು ರಮೇಶ್, ದಿನೇಶ್, ಸಿ.ಎನ್.ಅಶೋಕ್, ಸಿಂಹಾದ್ರಿ ಮಂಜಣ್ಣ, ಸಿ.ಜಿ.ಮಂಜುನಾಥ್, ಸ್ಕೌಟ್ ಗೈಡ್ಸ್‌ನ ತಾಲೂಕು ಪದಾಧಿಕಾರಿಗಳು ಇದ್ದರು.