

ಚನ್ನರಾಯಪಟ್ಟಣ: ಪ್ರತಿಯೊಂದು ಗ್ರಾಮವೂ ಅಗತ್ಯ ಸೌಲಭ್ಯಗಳನ್ನು ಹೊಂದಿದಾಗ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ನ ವಿಭಾಗೀಯ ಕೃಷಿ ತಜ್ಞ ಎಚ್.ವಿ.ರಮೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಚಿಕ್ಕಮತ್ತಿಗಟ್ಟ ಗ್ರಾಮದಲ್ಲಿ ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ ವತಿಯಿಂದ ಸಿಎಸ್ಆರ್ ಅನುದಾನದಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸೋಲಾರ್ ಬೀದಿ ದೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಶುದ್ಧ ಕುಡಿಯುವ ನೀರಿನ ಲಭ್ಯತೆಯು ಗ್ರಾಮಸ್ಥರ ಆರೋಗ್ಯ ಕಾಪಾಡುವುದರ ಜತೆಗೆ ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಬೀದಿ ದೀಪಗಳು ರಾತ್ರಿ ವೇಳೆ ಗ್ರಾಮೀಣ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಒದಗಿಸುತ್ತವೆ ಎಂದರು.
ಅಭಿವೃದ್ಧಿ ಕಾರ್ಯಗಳು ಗ್ರಾಮಗಳ ಮೂಲಸೌಕರ್ಯವನ್ನು ಬಲಪಡಿಸುವುದರ ಜತೆಗೆ ಗ್ರಾಮೀಣ ಜನರಲ್ಲಿ ಹೊಸ ಭರವಸೆ, ಆತ್ಮವಿಶ್ವಾಸ ಮೂಡಿಸುತ್ತವೆ. ಸಮಾಜದ ಅಗತ್ಯಗಳನ್ನು ಗುರುತಿಸಿ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕಾರ್ಯಗಳೇ ನಿಜವಾದ ಸಾಮಾಜಿಕ ಸೇವೆಯ ಪ್ರತೀಕಗಳಾಗಿವೆ ಎಂದು ಹೇಳಿದರು.
ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಕೇವಲ ಕರ್ತವ್ಯವೆಂದು ಪರಿಗಣಿಸದೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವ ಅವಕಾಶವಾಗಿ ಸ್ವೀಕರಿಸಬೇಕು. ಸಿಎಸ್ಆರ್ ನಿಧಿಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪಗಳ ಅಳವಡಿಕೆಯಂತಹ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವುದು ಶ್ಲಾಘನೀಯ ಎಂದರು.
ಸರ್ಕಾರದ ಅಭಿವೃದ್ಧಿ ಪ್ರಯತ್ನಗಳಿಗೆ ಪೂರಕವಾಗಿ ಕಂಪನಿಗಳು ಇಂತಹ ಜನಪರ ಯೋಜನೆಗಳಿಗೆ ಕೈಜೋಡಿಸಿದಾಗ ಸುಸ್ಥಿರ, ಸ್ವಾವಲಂಬಿ ಹಾಗೂ ಸಮೃದ್ಧ ಗ್ರಾಮಗಳ ನಿರ್ಮಾಣ ಸಾಧ್ಯವಾಗುತ್ತದೆ. ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿಸುವ ಇಂತಹ ಕಾರ್ಯಗಳು ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ನ ವಲಯ ವ್ಯವಸ್ಥಾಪಕ ಬಿ.ಪ್ರವೀಣ್ ಕುಮಾರ್, ಹಿರಿಯ ಕೃಷಿ ತಜ್ಞರಾದ ಕಿರಣ್ ಕುಮಾರ್, ರಾಜಶೇಖರ್, ಮಾರ್ಕೆಟಿಂಗ್ ಅಧಿಕಾರಿ ಅಲೋಕ್, ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್, ಉಪನ್ಯಾಸಕ ಬಾವಿಮನೆ ಚಂದ್ರಶೇಖರ್ ಉಪಸ್ಥಿತರಿದ್ದರು.