

ಹೊಳೆನರಸೀಪುರ : ಸ್ವಾತಂತ್ರ್ಯ ಪೂರ್ವದಲ್ಲೇ ಬಡವರಿಗೆ, ದೀನ ದಲಿತರಿಗೆ ಅಕ್ಷರ-ಅನ್ನ ನೀಡಲು ಶ್ರಮಿಸಿದ ಶಿವರಾತ್ರಿ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ತೇಜೂರು ಶ್ರೀ ಸಿದ್ಧರಾಮೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಕಲ್ಯಾಣಸ್ವಾಮಿ ಹೇಳಿದರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 111ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೆಎಸ್‌ಎಸ್ ಮಠದಲ್ಲಿ ಯಾವುದೇ ಜಾತಿಬೇಧ ಇಲ್ಲ. ಬಸವಣ್ಣ ತತ್ವ ಪಾಲಿಸುತ್ತಿರುವ ಶ್ರೀ ಮಠದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಲಾಗುತ್ತದೆ. ವಿದ್ಯಯ ಜತೆಗೆ ವಿವೇಕ ಸಹ ಕಲಿಸಲಾಗುತ್ತಿದೆ ಎಂದರು.
ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್.ಎಸ್.ಸಿದ್ಧಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ರಾಜಗುರುತಿಲಕ ಶಿವರಾತ್ರಿ ರಾಜೇಂದ್ರ ಶ್ರೀಗಳ ತಪಸ್ಸು ಮತ್ತು ದೂರದೃಷ್ಟಿಯ ಫಲವಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ವಿಶ್ವದೆಲ್ಲೆಡೆ ಬೆಳೆಯಲು ಸಾಧ್ಯವಾಗಿದೆ.
ಹಸಿವಿನ ಬಗ್ಗೆ ಅರಿವಿದ್ದ ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಸ್ಟೆಲ್ ತೆರೆದು ಊಟದ ವ್ಯವಸ್ಥೆ ಮಾಡಿದ್ದರು. ಅಂದು ಸುತ್ತೂರು ಮಠ ಆರ್ಥಿಕವಾಗಿ ತೊಂದರೆಯಲ್ಲಿತ್ತು. ಒಂದು ದಿನ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿಸಲು ಆಹಾರ ಪದಾರ್ಥಗಳು ಇಲ್ಲದಿದ್ದಾಗ, ಅವರು ಧರಿಸಿದ್ದ ಚಿನ್ನದ ಕರಡಿಗೆ ಮಾರಿ ಪ್ರಸಾದ ವ್ಯವಸ್ಥೆ ಮಾಡಿದ್ದರು ಎಂದರು.
ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಮಾತನಾಡಿ, ದೊಡ್ಡಕಾಡನೂರಿನಲ್ಲಿ ಡಾ.ರಾಜೇಂದ್ರ ಶ್ರೀಗಳು ತೆರಳುತ್ತಿದ್ದ ಕಾರು ಕೆಟ್ಟು ನಿಂತಿತ್ತು. ಈ ವೇಳೆ ಮಠದ ಭಕ್ತರು ಡಾ.ರಾಜೇಂದ್ರ ಶ್ರೀಗಳ ದರ್ಶನ ಪಡೆದು ನಮ್ಮೂರಿನಲ್ಲಿ ಒಂದು ಪ್ರೌಢಶಾಲೆ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಇದರ ಫಲವಾಗಿ ಇಲ್ಲಿ ಪ್ರೌಢಶಾಲೆ ಪ್ರಾರಂಭವಾಯಿತು. ನಂತರ ಪದವಿ ಪೂರ್ವ ಕಾಲೇಜು, ಆ ನಂತರ ಡಿ.ಇಡಿ ಕಾಲೇಜು ಪ್ರಾರಂಭಿಸಿದರು. ಸದ್ಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈ ಭಾಗದ ಪಾಲಕರಿಗೆ ಅತ್ಯಂತ ಕಡಿಮೆ ಶುಲ್ಕಕ್ಕೆ ನುರಿತ ಬೋಧಕರಿಂದ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದ ದ್ವಿತೀಯ ಪಿಯುಸಿ ವರ್ಷಿತಾ ಹಾಗೂ ಎಸ್‌ಎಸ್‌ಎಲ್‌ಸಿ ಲಾವಣ್ಯ ಮತ್ತು ಚಾರು ಅವರಿಗೆ ಸನ್ಮಾನ ಮಾಡಲಾಯಿತು.
ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಕೊಂಡ್ಲಯ್ಯ, ಹಿರಿಯ ವಿದ್ಯಾರ್ಥಿ ರೇವಣ್ಣ ನಾಯಕ್, ದೊಡ್ಡಕಾಡನೂರು ಗ್ರಾಮದ ಮುಖಂಡರಾದ ತೇಜುಸ್ವಾಮಿ, ಕುಮಾರ್ ರವಿ ಶಿಕ್ಷಕ ಜಗದೀಶ್, ಕುಮಾರ್, ಚಂದ್ರಶೇಖರ್, ಕನ್ನಡ ಉಪನ್ಯಾಸಕಿ ರೇಣುಕಾ ತಿಗರೇರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಮ್ಮ, ಮುಖ್ಯಶಿಕ್ಷಕ ಸುರೇಶ್, ಎಂ.ಸೋಮಣ್ಣ, ಮಠದ ಭಕ್ತರು, ಹಿರಿಯ ವಿದ್ಯಾರ್ಥಿಗಳು,ಪಾಲಕರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ತೆರೆದ ವಾಹನದಲ್ಲಿ ರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರ ಇಟ್ಟು, ದೊಡ್ಡಕಾಡನೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.