ಅಂತಿಮ ಹಂತದಲ್ಲಿ ಎಸ್‌ಐಆರ್ ಪರಿಷ್ಕರಣೆ

2,294 ಜನರಿಗೆ ದಾಖಲೆ ಸಲ್ಲಿಸಲು ಅವಕಾಶ
ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಮತಪಟ್ಟಿ ಪರಿಷ್ಕರಣೆ ಕುರಿತು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾಹಿತಿ ನೀಡಿದರು. ರುದ್ರಮುನಿ, ಭಾಸ್ಕರ್, ನಾಗೇಂದ್ರ ಕುಮಾರ್ ಇದ್ದರು.
ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಮತಪಟ್ಟಿ ಪರಿಷ್ಕರಣೆ ಕುರಿತು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾಹಿತಿ ನೀಡಿದರು. ರುದ್ರಮುನಿ, ಭಾಸ್ಕರ್, ನಾಗೇಂದ್ರ ಕುಮಾರ್ ಇದ್ದರು.
Published on: 

ಅರಕಲಗೂಡು: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅಂತಿಮ ಹಂತ ತಲುಪಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವ 2,294 ಜನರಿಗೆ ಮತ್ತೊಮ್ಮೆ ದಾಖಲೆ ಒದಗಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ತಿಳಿಸಿದರು.

ಕ್ಷೇತ್ರದ ವಿವಿಧ ಹೋಬಳಿಗಳಲ್ಲಿ ಒಟ್ಟು 13,880 ಮತದಾರರಿಗೆ ಅಗತ್ಯ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಲಾಗಿತ್ತು. ಈ ಪೈಕಿ 13,564 ಜನರು ದಾಖಲೆ ಸಲ್ಲಿಸಿದ್ದಾರೆ. ಆದರೆ 2,294 ಜನರು ಇದುವರೆಗೆ ಅಗತ್ಯ ದಾಖಲೆ ಒದಗಿಸಿಲ್ಲ. ಪ್ರಸ್ತುತ ವಿಧಾನಸಭಾ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಕೈಬಿಡುವ ಉದ್ದೇಶವಿಲ್ಲ. ಕೆಲವು ಮಾಹಿತಿಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಸಲುವಾಗಿ ಎಲ್ಲ ಹೋಬಳಿಗಳ ವ್ಯಾಪ್ತಿಯಲ್ಲಿ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಬಾಕಿ ಉಳಿದಿರುವವರಿಗೂ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು, ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಧಾನಸಭಾ ಕ್ಷೇತ್ರದ ಆರು ಹೋಬಳಿಗಳಲ್ಲೂ ತಲಾ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನೋಟಿಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಮತದಾರರಿಗೆ ನೆರವಾಗಲಿದ್ದಾರೆ. ನೋಟಿಸ್ ಪಡೆದವರಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವವರು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಹಾಗೂ ಇತರೆ ಅನಿವಾರ್ಯ ಕಾರಣಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕುಟುಂಬಗಳ ಸದಸ್ಯರು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದರೆ ಅವುಗಳನ್ನು ಸಹ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಸುಮಾರು 1.46 ಲಕ್ಷ ಮತದಾರರ ಮಾಹಿತಿಯನ್ನು ಅಂತಿಮ ಹಂತದ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಒಟ್ಟಾರೆ ಸುಮಾರು 2.12 ಲಕ್ಷ ಮತದಾರರು ಅಂತಿಮ ಪಟ್ಟಿಯಲ್ಲಿ ಸೇರುವ ನಿರೀಕ್ಷೆಯಿದೆ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದರು.

ಕೊಣನೂರಿನಲ್ಲಿ ಪ್ರಜಾಸೇವಾ ಆಂದೋಲನ: ತಾಲೂಕಿನ ಕೊಣನೂರು ಸಮುದಾಯ ಭವನದಲ್ಲಿ ಸೆ.26ರಂದು ಪ್ರಜಾಸೇವಾ ಆಂದೋಲನ ಸಭೆ ನಡೆಯಲಿದೆ. ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಸಾಧ್ಯವಾದಷ್ಟು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮನವಿ ಮಾಡಿದರು.

ಮತಪಟ್ಟಿ ಅಧಿಕಾರಿ ರುದ್ರಮನಿ, ಚುನಾವಣಾ ವಿಭಾಗದ ಭಾಸ್ಕರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಇದ್ದರು.

ಚಿತ್ರ ಶೀರ್ಷಿಕೆ- 25-ಎಆರ್‌ಕೆ-ಎಸ್‌ಐಆರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net