ಕೆ.ಆರ್.ಸಾಗರ: ಸಾಲ ಹೆಚ್ಚಾದ ಕಾರಣ ಭಾನುವಾರ ಇಲ್ಲಿನ ಪವರ್ ಫ್ಲಾಂಟ್ ನಾಲೆಗೆ ಹಾರಿ ಯುವಕ ಆತ್ಮಹತ್ಯೆ ಮಡಿಕೊಂಡಿದ್ದಾನೆ.
ಕೆ.ಆರ್.ಪೇಟೆ ತಾಲೂಕಿನ ದೊಡ್ಡಗಾಡನಹಳ್ಳಿ ನಿವಾಸಿ ರಾಜೇಗೌಡರ ಪುತ್ರ ಕಿರಣ್(28) ಆತ್ಮಹತ್ಯೆಗೆ ಶರಣಾದವ.
ಸಾಲ ಹೆಚ್ಚಾಗಿ ಅದನ್ನು ತೀರಿಸಲು ಆಗುತ್ತಿಲ್ಲವೆಂಬ ಕಾರಣಕ್ಕೆ ಕೆ.ಆರ್.ಸಾಗರ ಬಳಿಯ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇಲ್ಲಿಗೆ ಬಂದು ಶವ ತೆಗೆದುಕೊಂಡು ಹೋಗಿ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ.
ಅಲ್ಲದೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಬೈಕ್ ಅನ್ನು ನಾಲೆ ಆಸುಪಾಸಿನಲ್ಲಿ ನಿಲ್ಲಿಸಿದ್ದರಿಂದ ಸಾರ್ವಜನಿಕರು ಈ ಸಂಬಂಧ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮೃತನ ತಂದೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ನೋಡಿದ್ದು, ನಾಲೆ ಬಳಿ ತೆರಳಿದಾಗ ಅಲ್ಲಿದ್ದ ಬೈಕ್ ತಮ್ಮ ಮಗನದ್ದು ಎಂದು ತಂದೆ ಗುರುತಿಸಿದ್ದಾರೆ.
ನುರಿತ ಈಜುಗಾರರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಶವ ಹೊರಗೆ ತೆಗೆದಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ್ ಈ ಮೊದಲು ಕೂಡ ಸಾಲ ಮಾಡಿದ್ದು ಜಮೀನು ಮಾರಿ ತೀರಿಸಲಾಗಿತ್ತು. ನಂತರ ಮತ್ತೆ ಸಾಲ ಮಾಡಿದ್ದು ಸಾಲ ಕೊಟ್ಟವರು ಮರು ಪಾವತಿ ಮಾಡಲು ಕೇಳುತ್ತಿದ್ದರಿಂದ ಸಾಲಗಾರರರ ಕಾಟ ತಡೆಯಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.