ಉತ್ತಮ ಬದುಕಿಗೆ ಯೋಗ, ಧ್ಯಾನ ಅತ್ಯಗತ್ಯ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೆಬ್ಬಾಳು ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ  ಉದ್ಘಾಟಿಸಿದರು. ಸುರೇಶ್ ಮೊಯ್ಲಿ, ಮಂಜುಳಾ, ಅಣ್ಣಪ್ಪ ಇತರರು ಇದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೆಬ್ಬಾಳು ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸುರೇಶ್ ಮೊಯ್ಲಿ, ಮಂಜುಳಾ, ಅಣ್ಣಪ್ಪ ಇತರರು ಇದ್ದರು.
Published on
ಬೇಲೂರು: ಆತ್ಮ, ಮನಸ್ಸು, ದೇಹ ಶುದ್ಧಿಯಾಗಿ ಉತ್ತಮ ಬದುಕು ಸಾಗಿಸಲು ಯೋಗ, ಧ್ಯಾನ, ಪ್ರಾಣಾಯಾಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನ ಗೆದ್ದು ಮಾರು ಗೆಲ್ಲು ಎಂಬ ಗ್ರಾಮೀಣ ಮಾತಿನಂತೆ ಮೊದಲು ತನ್ನ ಕುಟುಂಬ, ಮನೆಯನ್ನು ಸರಿಪಡಿಸಿಕೊಂಡು ಅಲ್ಲಿ ನೆಮ್ಮದಿ ಸಾಧಿಸಿದ ನಂತರವೇ ಹೊರಗಿನ ಲೋಕ ಗೆಲ್ಲಲು ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಅಂತರಂಗವನ್ನು ಗೆಲ್ಲದೆ ನಾಡನ್ನು ಗೆಲ್ಲಲು ಹೋಗಿ ಅನಾಹುತಕ್ಕೆ ಮುಂದಾಗುತಿದ್ದಾರೆ ಎಂದರು.
ಮನ ಮತ್ತು ಆತ್ಮಶುದ್ಧಿಗಾಗಿ ಶ್ರಮಪಡಬೇಕು. ಆಡಂಬರದ ಭಕ್ತಿಯನ್ನು ದೇವರು ಮೆಚ್ಚುವುದಿಲ್ಲ. ಪ್ರಸಕ್ತ ದಿನಗಳಲ್ಲಿ ಪಾಲಕರು, ಶಿಕ್ಷಕರು ಮಕ್ಕಳನ್ನು ಅಂಕಕ್ಕೆ ಮಾತ್ರ ಸೀಮಿತಮಾಡುತ್ತಿದ್ದಾರೆ. ಪಠ್ಯದ ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕಾರ ಕಲಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಸರ್ಕಾರಗಳು ತಮ್ಮ ಯೋಜನೆಯನ್ನು ಜಾತಿ, ಧರ್ಮದ ಹೆಸರಿನಲ್ಲಿ ತರುವ ಕಾರಣ ಧರ್ಮಾಂಧತೆ ದೇಶದಲ್ಲಿ ವ್ಯಾಪಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತಮ ಕೆಲಸವಾಗುತ್ತಿದೆ. ಅಲ್ಲದೆ ಇಂತಹ ಸಾಮೂಹಿಕ ಸತ್ಯನಾರಾಯಣ ಪೂಜೆಯೂ ತಮ್ಮಲ್ಲಿನ ಭವ ಬಂಧನ ತೊರೆದು ಉತ್ತಮ ಮಾರ್ಗ ಕರುಣಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ ಮಾತನಾಡಿ, ಯೋಜನೆಯಿಂದ ರಾಜ್ಯಾದ್ಯಂತ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ. ಮಹಿಳೆಯರ ಸ್ವಾವಲಂಬನೆ ಬದುಕಿಗೆ ಹಲವಾರು ಯೋಜನೆಗಳೊಂದಿಗೆ ಅಂಗವಿಕಲರು ಮತ್ತು ವೃದ್ಧರಿಗೆ ಮಾಸಾಶನ ನೀಡುತ್ತಿದೆ. ವಿದ್ಯಾರ್ಥಿವೇತನ, ನಿಗರ್ತಿಕರಿಗೆ ಮನೆ ನಿರ್ಮಾಣ, ಕೆರೆ ಕಟ್ಟೆಗಳ ಅಭಿವೃದ್ಧಿ, ಐತಿಹಾಸಿಕ ದೇಗುಲಗಳ ಮರು ನಿರ್ಮಾಣ, ಸ್ವಚ್ಛತಾ ಆಂದೋಲನ, ಮದ್ಯವರ್ಜನ ಶಿಬಿರ ಸೇರಿದಂತೆ ಸಮಾಜದಲ್ಲಿ ಸಾಕಷ್ಟು ಕೆಲಸ ಮಾಡುವುದಲ್ಲದೆ, ಪ್ರತಿ ವರ್ಷ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಸುತ್ತಾ ಬಂದಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೇಲೂರು ಯೋಜನಾಧಿಕಾರಿ ಮಂಜುಳಾ, ಮೇಲ್ವಿಚಾರಕ ಅಣ್ಣಪ್ಪ, ಪ್ರಮುಖರಾದ ರತಿದೇವಿ, ಜಗದೀಶ್, ಚಂದ್ರಶೇಖರಯ್ಯ, ರಾಮೇಗೌಡ, ಹರಿಣಿ, ಸೋಮಶೇಖರ, ಭುವನೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net