ಹಾಸನದ ಎಂ.ಜಿ.ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಕವಿತಾ ಯೋಗೇಶ್ ಅವರ ಚೊಚ್ಚಲ ಕವನ ಸಂಕಲನ ಕಾಡು ಕುಸುಮ ಕೃತಿಯನ್ನು ಬಿಡುಗಡೆ ಮಾಡಲಾಯಿತು. ರವಿಕುಮಾರ್, ಬೇಲೂರು ರಘುನಂದನ್, ಶಿವಾನಂದ ತಗಡೂರು, ಮದನ್ ಗೌಡ, ಜೆ.ಆರ್. ಕೆಂಚೇಗೌಡ, ರವಿ ನಾಕಲಗೂಡು ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಒತ್ತಡದ ನಡುವೆಯೂ ವಿವಿಧ ರಂಗದಲ್ಲಿ ಮಹಿಳೆಯರ ಸಾಧನೆ
ಲ್ಲಾ ಸತ್ರ ನ್ಯಾಯಾಧೀಶ ರವಿಕುಮಾರ್ ಶ್ಲಾಘನೆ
ಕಾಡು ಕುಸುಮ ಕವನ ಸಂಕಲನ ಬಿಡುಗಡೆ
ಹಾಸನ:ಒತ್ತಡದ ನಡುವೆಯೂ ವಿವಿಧ ರಂಗಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ರವಿಕುಮಾರ್ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕವಿತಾ ಯೋಗೇಶ್ ಅವರ ಚೊಚ್ಚಲ ಕವನ ಸಂಕಲನ ‘ಕಾಡು ಕುಸುಮ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕವಿತಾ ಯೋಗೇಶ್ ಅವರ ಸಾಹಿತ್ಯ ಪ್ರಯತ್ನವನ್ನು ಶ್ಲಾಘಿಸಿದ ಅವರು, ದೇವರು ಹೆಣ್ಣಿಗೆ ಅಪಾರ ಶಕ್ತಿಯನ್ನು ನೀಡಿದ್ದಾನೆ. ಕವಿತೆ ಕೇವಲ ಊಹೆ ಅಥವಾ ಭ್ರಮೆಯಿಂದ ಹುಟ್ಟುವುದಿಲ್ಲ. ಜೀವನದಲ್ಲಿ ಅನುಭವಿಸಿದ ನೋವು, ನಲಿವು, ಸಂಕಟಗಳೇ ಇಲ್ಲಿ ಕವಿತೆಯಾಗಿ ಅಭಿವ್ಯಕ್ತಿಗೊಂಡಿವೆ ಎಂದರು.
ನಮ್ಮ ಜೀವನಾನುಭವವೇ ವ್ಯಕ್ತಿತ್ವವನ್ನು ಪರಿಪಕ್ವಗೊಳಿಸುತ್ತದೆ. ಮನಸ್ಸಿನಲ್ಲಿ ಅನುಭವಗಳಿದ್ದರೆ ಕವಿತೆ ತಾನಾಗಿಯೇ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಸಮಾಜದಲ್ಲಿ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿರುವುದು ಚಿಂತಾಜನಕ ಸಂಗತಿ. ಉತ್ತಮ ವಿಚಾರಗಳು ಸಾಹಿತ್ಯದ ಮೂಲಕ ಜನಮನಕ್ಕೆ ತಲುಪಬೇಕು. ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ
ಸಂದರ್ಭದಲ್ಲಿ ಉತ್ತಮ ಸಾಹಿತ್ಯ ಹೊರಬರಬೇಕು ಎಂದರು.
ಉತ್ತಮ ಸಾಹಿತ್ಯ ಕೃತಿಗಳ ಓದುವಿಕೆಯಿಂದ ಸಜ್ಜನಿಕೆ ಹೆಚ್ಚುತ್ತದೆ. ಜ್ಞಾನವಿಕಾಸವಾಗುತ್ತದೆ. ಒಳ್ಳೆಯ ಸಾಹಿತ್ಯ ಹೊರ ಬರಬೇಕು ಎಂದರೆ ಭಾಷಾಜ್ಞಾನವೂ ಮುಖ್ಯ. ಈ ದಿಸೆಯಲ್ಲಿ ಪೂರಕ ಅಧ್ಯಯನಕ್ಕೆ ಗಮನ ನೀಡಬೇಕು ಎಂದರು.
ಸಾಹಿತ್ಯ ಕೃಷಿ ಎಲ್ಲರಿಗೂ ಸಾಧ್ಯವಿಲ್ಲ. ಭಾವನೆಗಳು ಎಲ್ಲರಲ್ಲೂ ಹುಟ್ಟುತ್ತವೆ. ಆದರೆ ಅವುಗಳಿಗೆ ಸೂಕ್ತ ಬರಹ ರೂಪ ನೀಡುವ ಶಕ್ತಿ ಕೆಲವೇ ಜನರಿಗೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕವಿತಾ ಯೋಗೇಶ್ ಅವರ ಆಸಕ್ತಿ ಮತ್ತು ಶ್ರದ್ಧೆ ಶ್ಲಾಘನೀಯವಾಗಿದೆ ಎಂದು ನ್ಯಾಯಾಧೀಶ ರವಿಕುಮಾರ್ ಹೇಳಿದರು.
ಕವಿತೆ ರಚನೆ ಕೃಷಿಯನ್ನು ಮಧ್ಯದಲ್ಲೇ ನಿಲ್ಲಿಸಬಾರದು. ಇನ್ನೂ ಎತ್ತರಕ್ಕೆ ಬೆಳೆಯಲು ಹಾಗೂ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆ ನೀಡಲು ಕವಿತಾ ಅವರಿಂದ ಸಾಧ್ಯವಿದೆ. ಅವರ ಇನ್ನಷ್ಟು ಕೃತಿಗಳು ಹೊರಬರಲಿ ಎಂದವರು ಆಶಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪ್ರತಿಯೊಬ್ಬ ಗೃಹಿಣಿಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಆಸೆಗಳಿರುತ್ತವೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಈ ನಡುವೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ತುಡಿತ ಮತ್ತು ನಿರಂತರ ಪ್ರಯತ್ನದೊಂದಿಗೆ ಮೊದಲ ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಕವಿತಾ ಯೋಗೇಶ್ ಅವರು ಗೃಹಿಣಿಯರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಸಾಹಿತಿ ಬೇಲೂರು ರಘುನಂದನ್, ಕೊಟ್ರೇಶ್ ಉಪ್ಪಾರ, ಸುರೇಶ್ ಗುರೂಜಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಉದಯರವಿ, ಸಾಹಿತಿ ಕವಿತಾ ಯೋಗೇಶ್, ವಕೀಲ ಯೋಗೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ.ಪಿ. ಶೇಖರ್ ಇತರರಿದ್ದರು.