ಬೇಲೂರು: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಮಂಗಳವಾರ ಸಂಜೆ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ನೂರಾರು ಮಹಿಳೆಯರು ಕಪ್ಪು ಉಡುಗೆಯೊಂದಿಗೆ ‘ಸಮಾನತೆಯೆಡೆಗೆ ನಮ್ಮ ನಡಿಗೆ’ ಘೋಷಣೆಯಡಿ ಕಲ್ಯಾಣ ಮಂಟಪದಿಂದ ಕಾಲ್ನಡಿಗೆ ಮೂಲಕ ಮೇಣದ ಬತ್ತಿಯೊಂದಿಗೆ ಬಸವೇಶ್ವರ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರವಾಧ್ಯಕ್ಷೆ ಹಾಗೂ ಹಾಸನ ಮಲ್ನಾಡ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಸಾವಿತ್ರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸುತ್ತೇವೆ. ಮುಂದೆ ದೌರ್ಜನ್ಯಗಳು ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಿ ಸಮಾನ ಹಕ್ಕುಗಳಿಗಾಗಿ ಆಗ್ರಹಿಸುತ್ತೇವೆ. 13 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಮ್ಮ ಸಂಘಟನೆಯಿಂದ ಸಮಾವೇಶ ನಡೆಸುತ್ತಿದ್ದೇವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ಚೈತನ್ಯ ದಿನವಾಗಿ ಆಚರಿಸುವ ಉದ್ದೇಶದಿಂದ 14ನೇ ಜಿಲ್ಲೆಯಾಗಿ ಹಾಸನವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮಾ.7ರಂದು ಮಹಿಳೆಯರ ಹಕ್ಕುಗಳಿಗಾಗಿ ಬೃಹತ್ ಜಾಥಾ ನಡೆಯಲಿದ್ದು, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ವಿಚಾರ ಮಂಡನೆ ಮಾಡಲಿದ್ದಾರೆ. ಅದೇ ದಿನ ಸಂಜೆ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯಾವುದೇ ಘೋಷಣೆಗಳಿಲ್ಲದೆ ಮೌನದ ಮೂಲಕ ದೌರ್ಜನ್ಯ ವಿರೋಧಿ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಮೂಲ ಉದ್ದೇಶವಾಗಿದೆ. ಮಾ.8 ರಂದು ರಾಜ್ಯ ಹಾಗೂ ಹೊರ ರಾಜ್ಯದ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಸಾಮಾಜಿಕ ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಲಿವೆ. ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಕಠಿಣ ಭದ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಗೌರವ ಕಾಪಾಡಬೇಕು. ಅಂದಿನ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಖಜಾಂಚಿ ಭಾನುಮತಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ. ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯುತ್ತದೆ ಎಂಬ ಸಂದೇಶವನ್ನು ಮೌನದ ಮೂಲಕ ಸಾರಲಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸೌಭಾಗ್ಯಾ ಆಂತೋಣಿ, ಜಿ.ಟಿ.ಇಂದಿರಾ, ವೀರಶೈವ ಲಿಂಗಾಯತ-ಮಹಾಸಭಾ ಅಧ್ಯಕ್ಷೆ ವಿಂಪು ಸಂತೋಷ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಾಮಾಕ್ಷಿ ರಾಜು, ಮುಖಂಡರಾದ ಚಂದ್ರಕಲಾ, ಮಂಜುಳಾ ಭಾಗವಹಿಸಿದ್ದರು.