ಹಸುಗೂಸಿನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆ ವಿಚಾರಣೆ

ಹಸುಗೂಸಿನೊಂದಿಗೆ ಭಿಕ್ಷಾಟನೆ ನಡೆಸದಂತೆ ಸಿಡಿಪಿಒ ವೆಂಕಟೇಶ್ ಅರಕಲಗೂಡಿನಲ್ಲಿ ವಲಸಿಗ ಕುಟುಂಬಗಳಿಗೆ ಜಾಗೃತಿ ಮೂಡಿಸಿದರು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಸವಿತಾ, ರಾಕೇಶ್ ಇದ್ದರು.
ಹಸುಗೂಸಿನೊಂದಿಗೆ ಭಿಕ್ಷಾಟನೆ ನಡೆಸದಂತೆ ಸಿಡಿಪಿಒ ವೆಂಕಟೇಶ್ ಅರಕಲಗೂಡಿನಲ್ಲಿ ವಲಸಿಗ ಕುಟುಂಬಗಳಿಗೆ ಜಾಗೃತಿ ಮೂಡಿಸಿದರು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಸವಿತಾ, ರಾಕೇಶ್ ಇದ್ದರು.
Published on
ಅರಕಲಗೂಡು: ಪಟ್ಟಣದಲ್ಲಿ ಹಸುಗೂಸಿನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಹೊರರಾಜ್ಯದ ಮಹಿಳೆಯನ್ನು ಬುಧವಾರ ಸಿಡಿಪಿಒ ವೆಂಕಟೇಶ್ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ತಡೆದು ವಿಚಾರಣೆ ನಡೆಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹಸುಗೂಸುಗಳನ್ನು ಕರೆದುಕೊಂಡು ಭಿಕ್ಷಾಟನೆ ಮಾಡುವುದು ಮಕ್ಕಳ ಹಕ್ಕಿಗೆ ವಿರುದ್ಧವಾಗಿದ್ದು, ಇದು ಕಾನೂನುಬಾಹಿರವೂ ಆಗಿದೆ ಎಂದು ಅಧಿಕಾರಿಗಳು ಮಹಿಳೆಗೆ ಮನವರಿಕೆ ಮಾಡಿಕೊಟ್ಟರು. ಜೀವನೋಪಾಯ ನಡೆಸಲು ಸಂಕಷ್ಟವಿದ್ದರೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಹಾಗೂ ಅಗತ್ಯ ನೆರವು ಪಡೆಯಲು ಅವಕಾಶವಿದ್ದು, ಅದಕ್ಕಾಗಿ ಸಂಬಂಧಿಸಿದ ಇಲಾಖೆಗಳು ಸಹಾಯ ಮಾಡುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಮುಂದಿನ ದಿನಗಳಲ್ಲಿ ಮಕ್ಕಳೊಂದಿಗೆ ಈ ರೀತಿಯಾಗಿ ಭಿಕ್ಷಾಟನೆ ಮಾಡುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದಳು.
ಇದಷ್ಟಕ್ಕೆ ತೃಪ್ತಿಪಡದೆ ಸಿಡಿಪಿಒ ವೆಂಕಟೇಶ್ ಅವರು ಮಹಿಳೆ ಸೇರಿದಂತೆ ವಲಸಿಗರು ನೆಲೆಸಿದ್ದ ಶೆಡ್‌ಗೆ ಭೇಟಿ ನೀಡಿ, ಅಲ್ಲಿದ್ದ ಕುಟುಂಬಗಳಿಗೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸಬಾರದು ಎಂದು ಎಚ್ಚರಿಕೆ ನೀಡಿದರು. ಜತೆಗೆ ಮಕ್ಕಳ ಸುರಕ್ಷತೆ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಿದರು.
ಮಕ್ಕಳ ಸಹಾಯವಾಣಿ ಸಿಬ್ಬಂದಿ ಸವಿತಾ, ರಾಕೇಶ್, ಪೊಲೀಸ್ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net