ನಿಡುಮನಹಳ್ಳಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

ತಾಲೂಕಿನ ನಿಡುಮನಹಳ್ಳಿ ಗ್ರಾಮದ ಬೀದಿಯಲ್ಲಿ ಭಾನುವಾರ ರಾತ್ರಿ ಮನೆಗಳ ಸಮೀಪವೇ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಜನರನ್ನು ತಿರುಗಿ ನೋಡುತ್ತಿರುವ ಒಂಟಿ ಕಾಡಾನೆ.
ತಾಲೂಕಿನ ನಿಡುಮನಹಳ್ಳಿ ಗ್ರಾಮದ ಬೀದಿಯಲ್ಲಿ ಭಾನುವಾರ ರಾತ್ರಿ ಮನೆಗಳ ಸಮೀಪವೇ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಜನರನ್ನು ತಿರುಗಿ ನೋಡುತ್ತಿರುವ ಒಂಟಿ ಕಾಡಾನೆ.
Published on
ಬೇಲೂರು: ತಾಲೂಕಿನ ನಿಡುಮನಹಳ್ಳಿ ಗ್ರಾಮದ ವಾಸದ ಮನೆಗಳ ಆಸುಪಾಸಿನಲ್ಲೆ ಭಾನುವಾರ ಮಧ್ಯರಾತ್ರಿ ಕಾಣಿಸಿಕೊಂಡ ಒಂಟಿ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಶೀಘ್ರ ಆನೆಯನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.
ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಅರಣ್ಯ ಸೇರಿದಂತೆ ಇತರ ಅಕ್ಕಪಕ್ಕದ ತೋಟಗಳಲ್ಲಿ ಈಗಾಗಲೇ ಸಾಕಷ್ಟು ಕಾಡಾನೆಗಳು ಬೀಡು ಬಿಟ್ಟಿವೆ. ಕೆಲ ದಿನಗಳ ಹಿಂದಷ್ಟೆ ಭೀಮಾ ಮತ್ತು ಕ್ಯಾಪ್ಟನ್ ಎಂಬ ಕಾಡಾನೆಗಳು ಗ್ರಾಮದ ಮನೆಗಳ ಮುಂಭಾಗದಲ್ಲೇ ಭೀಕರವಾಗಿ ಕಾದಾಡಿದ ಘಟನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಆಗಲೇ ಕಾಡಾನೆಗಳ ಹಿಂಡಿನಿಂದ ಬೇರಾದ ಒಂಟಿ ಆನೆಯೊಂದು ಭಾನುವಾರ ಮಧ್ಯರಾತ್ರಿ ನಿಡುಮನಹಳ್ಳಿ ಗ್ರಾಮದೊಳಗೆ ಬಂದು ಮನೆಗಳ ಸಮೀಪದಲ್ಲೇ ಓಡಾಡಿದೆ. ಜತೆಗೆ ಮುಂದೆ ಹೋಗುವ ಸಂದರ್ಭ ಹಿಂದೆ ಇದ್ದ ಜನರನ್ನು ನೋಡಿದ ತಕ್ಷಣ ರಸ್ತೆಯಲ್ಲೆ ನಿಂತು ತಿರುಗಿ ದಿಟ್ಟಿಸಿ ನೋಡಿ ಮುಂದೆ ಸಾಗಿದೆ. ಈ ದೃಶ್ಯ ನಿಡುಮನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಯಭೀತರನ್ನಾಗಿಸಿದೆ. ಜತೆಗೆ ಜಗಬೋರನಹಳ್ಳಿ ಅರಣ್ಯ ಸೇರಿದಂತೆ ಬಿಕ್ಕೋಡು ಸಮೀಪದ ಹುಲ್ಕೋಡು, ಕರಡಗೋಡು, ಕಸರಳ್ಳಿ, ಹುಸ್ಕೂರು ಗ್ರಾಮಗಳ ತೋಟಗಳ ಸುತ್ತಮುತ್ತಲೂ ಕಾಡಾನೆಗಳು ಪ್ರತ್ಯಕ್ಷವಾಗುತ್ತಿವೆ. ಇದರಲ್ಲಿ ಕೆಲ ಕಾಡಾನೆಗಳು ಯಾವಾಗ ಎಲ್ಲಿಗೆ ಹೊರಡುತ್ತವೆ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಈ ಭಾಗದಲ್ಲಿ ಜನರು ಜೀವ ಭಯದಲ್ಲೇ ಓಡಾಡುವಂತ್ತಾಗಿದೆ. ರಾತ್ರಿ ನಿಡುಮನಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿ ಕಾಡಾನೆಗೆ ರೇಡಿಯೋ ಕಾಲರ್ ಇಲ್ಲದ ಕಾರಣ ಈಗ ಅದು ಕರಡಗೋಡು ಗ್ರಾಮದ ತೋಟದಲ್ಲಿದೆ ಎಂದು ಇರಬಹುದು ಎನ್ನಲಾಗಿದೆ. ಒಂಟಿ ಕಾಡಾನೆಯಾದ್ದರಿಂದ ಎಲ್ಲಿ? ಯಾರ ಮೇಲಾದರೂ ದಾಳಿ ಮಾಡಿದರೆ ಯಾರು ಹೊಣೆ? ಎಂಬುದು ಗ್ರಾಮಸ್ಥರ ಆತಂಕವಾಗಿದೆ.
ಆದ್ದರಿಂದ ಒಂಟಿ ಕಾಡಾನೆಯನ್ನು ಕಾಡಾನೆಗಳ ಹಿಂಡಿಗೆ ಸೇರಿದರೆ ಒಳಿತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಡಾನೆಗಳನ್ನು ದೂರದ ಕಾಡಿಗೆ ಓಡಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net