ರೈತರು ಬೆಳೆದ ಬೆಳೆ ಕೇಳುವವರು ಯಾರು?

ಹೊಳೇನರಸೀಪುರದಲ್ಲಿ ಕೃಷಿ ಇಲಾಖೆ ಆಚರಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರನ್ನು ಸನ್ಮಾನಿಸಲಾಯಿತು. ಎಚ್.ಡಿ.ರೇವಣ್ಣ, ಮುನಿರಾಜು, ವೈ.ಎಂ.ರೇಣುಕುಮಾರ್, ಸ್ವಪ್ನ ಇತರರಿದ್ದರು.
ಹೊಳೇನರಸೀಪುರದಲ್ಲಿ ಕೃಷಿ ಇಲಾಖೆ ಆಚರಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರನ್ನು ಸನ್ಮಾನಿಸಲಾಯಿತು. ಎಚ್.ಡಿ.ರೇವಣ್ಣ, ಮುನಿರಾಜು, ವೈ.ಎಂ.ರೇಣುಕುಮಾರ್, ಸ್ವಪ್ನ ಇತರರಿದ್ದರು.
Published on

ಸರ್ಕಾರದ ವಿರುದ್ಧ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ

ಹೊಳೆನರಸೀಪುರ: ಸರ್ಕಾರ ಸೂಕ್ತ ಬೆಂಬಲ ಬೆಲೆಯಿಂದ ಖರೀದಿಸದಿದ್ದರೆ, ರೈತರ ಬೆಳೆದ ಬೆಳೆಗಳನ್ನು ಕೇಳುವವರು ಯಾರು? ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪಟ್ಟಣದ ಶಿಕ್ಷಕರ ಭವನದ ಡಾ.ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಾಪಾರಸ್ಥರು ಮನೆ ಮುಂದೆ ಬಂದು ಮುಸುಕಿನ ಜೋಳ ಕ್ವಿಂಟಾಲ್‌ಗೆ 1600 ರಿಂದ 1700 ರೂ. ನೀಡಿ ಖರೀದಿಸುತ್ತಾರೆ. ನಂತರ ಅದೇ ಮಧ್ಯವರ್ತಿಗಳು 2 ಸಾವಿರ ರೂ.ಗಳಿಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಕಷ್ಟಪಡುವುದು ರೈತರು, ಹಣ ಮಾಡುವುದು ದಲ್ಲಾಳಿಗಳು ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರ ಅಭ್ಯುದಯಕ್ಕೆ ಕಾರ್ಯಕ್ರಮ ರೂಪಿಸದಿದ್ದಲ್ಲಿ ಸಾಮಾಜಿಕ ಪ್ರಗತಿ ಅಸಾಧ್ಯ. ಒಂದು ದೇಶದ ಪ್ರಗತಿಗೆ ರೈತರೇ ಬೆನ್ನೆಲುಬು ಎಂಬುದು ಕೇವಲ ಘೋಷ ವಾಕ್ಯವಾಗಬಾರದು. ಕಾರ್ಯಗತವಾಗಬೇಕು ಎಂದರು.
ಕೃಷಿ ಇಲಾಖೆಗಳಲ್ಲಿ ಶೇ.60 ರಷ್ಟು ಖಾಲಿ ಹುದ್ದೆಗಳಿವೆ. ತಾಲೂಕಿನ ಕೃಷಿ ಇಲಾಖೆಯಲ್ಲಿ 18 ಹುದ್ದೆಗಳು ಖಾಲಿ ಇವೆ. ತೋಟಗಾರಿಕೆ ಇಲಾಖೆಯಲ್ಲಿ 10 ಹುದ್ದೆಗಳು ಖಾಲಿ ಇವೆ. ರೇಷ್ಮೆ, ಪಶು ಸಂಗೋಪನೆ ಇಲಾಖೆಗಳು ಇದಕ್ಕೆ ಹೊರತಾಗಿಲ್ಲ. ರೈತರಿಗೆ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲೇ ಖರೀದಿಸಿ ಕಳುಹಿಸಲಾಗುತ್ತದೆ. ಸ್ಥಳೀಯವಾಗಿ ಅರ್ಹರಿಗೆ ವಿತರಣೆ ಮಾಡುವುದಷ್ಟೆ ಜವಾಬ್ದಾರಿ. ಆದರೆ ಗುಣಮಟ್ಟ ಖಾತ್ರಿ ಇರುವುದಿಲ್ಲ. ಇದನ್ನೆಲ್ಲ ವಿಧಾನ ಸೌಧದಲ್ಲಿ ಪ್ರಶ್ನೆ ಮಾಡಿದ್ದಾಗಿದೆ. ಯಾವುದೇ ಪರಿಹಾರ ದೊರಕಿಲ್ಲ ಎಂದರು.
ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿಸುವಾಗ ರೈತರಿಂದ ಗುಣಮಟ್ಟದ ರಾಗಿ ಖರೀದಿಸುತ್ತಾರೆ. ಆದರೆ ಉಚಿತವಾಗಿ ಅನ್ನ ಭಾಗ್ಯ ಯೋಜನೆಅಡಿ ಪಡಿತರ ವಿತರಿಸುವಾಗ ಕಳಪೆ ರಾಗಿ ವಿತರಿಸುತ್ತಾರೆ. ಇದನ್ನು ಕೇಳುವವರಿಲ್ಲ. ಮೊದಲು ಇದನ್ನು ಸರಿಪಡಿಸಿ ಎಂದು ಶಾಸಕರನ್ನ ಸಭೆಯಲ್ಲಿದ್ದ ರೈತರು ಆಗ್ರಹಿಸಿದರು.
ತಾಪಂ ಇಒ ಮುನಿರಾಜ್, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಕೃಷಿ ಸಹಾಯಕ ನಿರ್ದೇಶಕಿ ಸ್ವಪ್ನ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net