ಮಾದೀಹಳ್ಳಿ ಹೋಬಳಿಯ ಗ್ರಾಮಗಳಾದ ಹುಲುಗುಂಡಿ, ಪೇಟೇಹಳ್ಳಿ, ಆಂದಲೆ, ಕಲ್ಯಾಣಪುರ, ಹಂದ್ರಾಳು, ಶಿವಯೋಗಿಪುರ, ಹೀರಗುಪ್ಪೆ ಸೇರಿದಂತೆ ಉಳಿದ 20ಕ್ಕು ಹೆಚ್ಚು ಗ್ರಾಮಗಳಲ್ಲಿನ ಸುಮಾರು 1200 ಕ್ಕು ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮುಸುಕು ಜೋಳ ಬಿತ್ತನೆ ಮಾಡಲಾಗಿದೆ. ಬಿತ್ತನೆಯ ಸಮಯದಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದು ಹೊರೆತುಪಡಿಸಿದರೆ ನಂತರದ ದಿನಗಳಲ್ಲಿ ಮಳೆೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಎರಡು ತಿಂಗಳ ಜೋಳಕ್ಕೆ ಬಿಳಿ ಸುಳಿ ರೋಗ ಕಾಣಿಸಿಕೊಂಡಿತ್ತು.ಆದರೆ ಈ ವರ್ಷ ಬಿತ್ತನೆ ಮಾಡಿ 30 ದಿನಗಳಲ್ಲೆ ಕಾಣಿಸಿಕೊಳ್ಳುತ್ತಿದೆ. ಎರಡು ಮೂರು ದಿನಗಳಲ್ಲಿ ಹೊಲವನ್ನೆಲ್ಲಾ ಆಕ್ರಮಿಸು ಹಂತಕ್ಕೆ ತಲುಪಿದೆ.