ಸಕಲೇಶಪುರ : ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಅಗತ್ಯ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ತಾಲೂಕಿನ ದೊಡ್ಡನಾಗರ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆರೆಗಳು ಗ್ರಾಮೀಣ ರೈತರ ಜೀವನಾಡಿಯಾಗಿವೆ. ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಿಂದಲೇ ಕೃಷಿ ಬದುಕು ಹಸನಾಗಲು ಸಾಧ್ಯವಾಗುತ್ತದೆ. ಕ್ಷೇತ್ರದ ಅನೇಕ ಭಾಗಗಳಲ್ಲಿ ರೈತರು ಇನ್ನೂ ಮಳೆಯಾಧಾರಿತ ಕೃಷಿಯನ್ನೇ ನಂಬಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಕೆರೆಗಳಿದ್ದರೂ ಅವುಗಳ ಸಮರ್ಪಕ ಅಭಿವೃದ್ಧಿ ಆಗದ ಕಾರಣ, ಮಳೆ ಕೊರತೆಯಾದಾಗ ಬರ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದರು.
ಹಿರಿಯರ ಕಾಲದಲ್ಲಿ ಕೆರೆಗಳೇ ಜೀವಜಲದ ಮೂಲವಾಗಿದ್ದವು. ಅವುಗಳ ನೆರವಿನಿಂದ ವರ್ಷಕ್ಕೆ ಮೂರು ಬೆಳೆ ಸೇರಿದಂತೆ ವಿವಿಧ ಉಪಕೃಷಿಗಳನ್ನು ನಡೆಸಲಾಗುತ್ತಿತ್ತು. ಇದೀಗ ಹಲವಾರು ಕೆರೆಗಳು ಹೂಳು ತುಂಬಿಕೊಂಡು, ಒತ್ತುವರಿಗೆ ಒಳಗಾಗಿ ನೀರು ನಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಲ ಮರುಪೂರಣಕ್ಕೂ ಹಿನ್ನಡೆಯಾಗಿದೆ ಎಂದು ಮಂಜು ಆತಂಕ ವ್ಯಕ್ತಪಡಿಸಿದರು.
ದೊಡ್ಡನಾಗರ ಗ್ರಾಮದ ತುಬಿನ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಡಿ ಕೆರೆ ಹೂಳೆತ್ತುವುದು, ಏರಿ ಮೇಲಿನ ಗಿಡಗಂಟೆ ತೆರವು, ತೂಬುಗಳ ದುರಸ್ತಿ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕೆರೆಗಳ ಅಭಿವೃದ್ಧಿಯಿಂದ ರೈತರ ನೀರಾವರಿ ಮಾತ್ರವಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ಹೇಳಿದರು. ಗ್ರಾಮದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.