ಚನ್ನರಾಯಪಟ್ಟಣ: ತಾಲೂಕು ನಲ್ಲಿ ಕೆಲಸಗಾರರ ಸಂಘದ ವತಿಯಿಂದ ವಿಶ್ವ ನಲ್ಲಿ ಕೆಲಸಗಾರರ ದಿನ ಹಾಗೂ ನೀರು ಉಳಿಸಿ ಜನ ಜಾಗೃತಿ ಜಾಥಾವನ್ನು ಮಾ.11ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ನಲ್ಲಿ ಕೆಲಸಗಾರರ ಸಂಘದ ಉಪಾಧ್ಯಕ್ಷ ಲಿಂಗರಾಜು ತಿಳಿಸಿದರು.
ಗೃಹಬಳಕೆ, ಕಟ್ಟಡ ನಿರ್ಮಾಣ, ಕೈಗಾರಿಕೆ ಕ್ಷೇತ್ರಗಳಲ್ಲಿ ನೀರಿನ ಯೋಜಿತ ಬಳಕೆ ಮಾಡಬೇಕು. ಜಲ ಸಾಕ್ಷರತೆಗೆ ಮಹತ್ವ ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಲಭ್ಯವಾಗುತ್ತಿರುವ ಕುಡಿಯುವ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಜಲ ಜಾಗೃತಿ ಮೂಲಕ ಜೀವಜಲ ಸಂರಕ್ಷಿಸಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ನಿಟ್ಟಿನಲ್ಲಿ ತಾಲೂಕು ನಲ್ಲಿ ಕೆಲಸಗಾರರ ಸಂಘದ ವತಿಯಿಂದ ವಿಶ್ವ ನಲ್ಲಿ ಕೆಲಸಗಾರರ ದಿನದಂದು ನೀರು ಉಳಿಸಿ ಜೀವ ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದದಿಂದ ಜಾಥಾ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್, ನಲ್ಲಿ ಕೆಲಸಗಾರರ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಭಾಗವಹಿಸುವರು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಪಿಂಚಣಿ ಹಾಗೂ ಸದಸ್ಯರ ನೋಂದಣಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗುವುದು. ತಾಲೂಕಿನ ನಲ್ಲಿ ಕೆಲಸಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕು ಸಂಘದ ಅಧ್ಯಕ್ಷ ಅಂತೋಣಿ, ಕಾರ್ಯದರ್ಶಿ ಲಕ್ಷ್ಮೀಶ, ಖಜಾಂಚಿ ರಘು, ಪದಾಧಿಕಾರಿಗಳಾದ ನಾರಾಯಣಿ, ಧರ್ಮ, ಶಿವು ಭಾಗವಹಿಸಿದ್ದರು.