ಮೊದಲ ದಿನ ಮೂಲ ದೇವರಿಗೆ ಅಭಿಷೇಕ, ಅಲಂಕಾರ ಹಾಗೂ ಮಹಾ ಮಂಗಳಾರತಿ ನಡೆದ ಬಳಿಕ ಭಕ್ತರು ಕೀರ್ತನೆ, ಭಜನೆಯ ಮೂಲಕ ಜ್ಞಾನೇಶ್ವರಿ ಗ್ರಂಥವನ್ನು ತಲೆಯ ಮೇಲೆ ಹೊತ್ತು ತಂದು ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಎರಡು ದಿನ ಗ್ರಂಥಕ್ಕೆ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಮೊದಲ ದಿನ ರಾತ್ರಿ ಕೀರ್ತನೆಯೊಂದಿಗೆ ಆರಂಭವಾಗುವ ಕಾರ್ಯಕ್ರಮ, ಅಖಂಡ ಭಜನೆ, ಪಾಳಿ ಭಜನೆ, ಸಂತವಾಣಿ, ಭಾರೂಡ್ ಹಾಗೂ ಬೆಳಗಿನ ಜಾವದ ಕಾಕಡಾರತಿಯೊಂದಿಗೆ ಒಂದು ಹಂತದ ಕಾರ್ಯಕ್ರಮವು ಸಂಪನ್ನವಾಗುತ್ತದೆ. ಪುನಃ ಮೂಲ ದೇವರ ಪೂಜೆಯನ್ನು ನೆರವೇರಿಸಿ ಉತ್ಸವ ಮೂರ್ತಿ ಮತ್ತು ಜ್ಞಾನೇಶ್ವರಿ ಗ್ರಂಥವನ್ನು ಪುಷ್ಪಮಂಟಪದಲ್ಲಿಟ್ಟು ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ದಾರಿಯುದ್ದಕ್ಕೂ ವಾರ್ಕರಿಗಳ ಭಜನೆ ಮತ್ತು ಭಕ್ತರ ಸಂಭ್ರಮಾಚರಣೆಯು ಮುಗಿಲು ಮುಟ್ಟುತ್ತದೆ. ಮಧ್ಯಾಹ್ನದ ವೇಳೆಗೆ ಉತ್ಸವವು ದೇಗುಲವನ್ನು ತಲುಪುತ್ತದೆ. ಬಳಿಕ ಸಾಂಪ್ರದಾಯಿಕ ಕಾಲಕೀರ್ತನೆ ಹಾಗೂ ಮಹಾಮಂಗಳಾರತಿ ಜರುಗಿಸಿ ಎರಡು ದಿನದ ದಿಂಡಿ ಉತ್ಸವಕ್ಕೆ ಮಂಗಳ ಹಾಡಲಾಗುತ್ತದೆ.