ವೀರಶೈವ ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮ

ಆಲೂರು ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಆಲೂರು ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅಭಿಮತ
ಆಲೂರು: ವೀರಶೈವ ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮ ಎಂದು ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸೇವಾ ಸಮಿತಿ ಆಲೂರು ಇವರ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಸಂಸ್ಕೃತ ಪದ ಲಿಂಗಾಯತ, ಲಿಂಗವಂತ ಎಂಬೆಲ್ಲ ಪರ್ಯಾಯ ನಾಮಗಳಿವೆ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ವೀರಶೈವ ಧರ್ಮ ವೃಕ್ಷದ ತಾಯಿ ಬೇರಿನಂತಿರುವ ರೇಣುಕಾಚಾರ್ಯರು ಸಕಲ ಜೀವಾತ್ಮರ ಅಭ್ಯುದಯಕ್ಕೆ ದುಡಿದವರು. ಭಾರತೀಯ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆಯಿತ್ತ ಕಾರುಣಿಕರು. ವೀರಶೈವ ಧರ್ಮೀಯರು ಸರ್ವ ಸಮರ್ಥರಾಗಿದ್ದರೂ ಜಾತೀಯತೆಯ ಸಂಕೋಲೆಯಿಂದ ಸಂಕಷ್ಟವನ್ನು ಎದುರಿಸುವಂತಾಗಿದೆ. ವೀರಶೈವ ಧರ್ಮದ ಕುರಿತಾಗಿ ಪ್ರಕಟಗೊಳ್ಳುವ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರತಿಯೊಬ್ಬರ ಮನೆ ಸೇರಬೇಕು ಎಂದು ಹೇಳಿದರು.
ಲಿಂಗಧರಿಸಿ ಲಿಂಗಪೂಜಿಸಿ ಲಿಂಗವೇನಾವಾಗುವ ಮಹತ್ವಪೂರ್ಣ ಘಟ್ಟವನ್ನು ವೀರಶೈವ ಧರ್ಮದಲ್ಲಿ ಕಾಣಬಹುದು. ಈ ಧರ್ಮದ ಸಂಸ್ಥಾಪಕರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಇಲ್ಲಿಯ ವೈಶಿಷ್ಟ್ಯ ಸ್ತ್ರೀ ಸಮಾನತೆ ಸೇರಿದಂತೆ ಒಳ್ಳೆಯ ಗುಣಗಳನ್ನು ಅರಿತು ಬ್ರಾಹ್ಮಣ ಕುಲದಲ್ಲಿ ಜನಿಸಿದ ಬಸವಣ್ಣನವರು ವೀರಶೈವ ಧರ್ಮವನ್ನು ಅನುಸರಿಸಿದರು ಎಂದು ತಿಳಿಸಿದರು.
ಸಂಕಲಾಪುರಮಠದ ಉತ್ತರಾಧಿಕಾರಿ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿರುವಷ್ಟು ಧರ್ಮಗಳು ಮತ್ತು ಆಚಾರ್ಯ ಶ್ರೇಷ್ಠರು ಬೇರಾವ ದೇಶಗಳಲ್ಲಿಯೂ ಇಲ್ಲ. ಅವರೆಲ್ಲರೂ ಇರುವುದರಿಂದಲೇ ಈ ನಾಡಿನಲ್ಲಿ ಶಾಂತಿ ಸಾಮರಸ್ಯ ಸದ್ಭಾವನೆಗಳು ಉಳಿದು ಬಂದಿವೆ. ಹಿರೇಮಠ ಕಾರ್ಜುವಳ್ಳಿ ಮಠ ಮತ್ತು ಸಂಕ್ಲಾಪುರಮಠ ಈ ತಾಲೂಕಿನ ಎರಡು ಕಣ್ಣುಗಳಿದ್ದಂತೆ. ಈ ಎರಡು ಮಠಗಳು ಭಕ್ತರ ಮತ್ತು ಸಮಾಜದ ಒಳಿತಿಗೆ ಎಂದಿಗೂ ಸಹಕರಿಸುತ್ತವೆ ಎಂದು ಹೇಳಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಸಾಧನೆ, ಬೋಧನೆ ಮತ್ತು ಮಾರ್ಗದರ್ಶನ ನಮ್ಮೆಲ್ಲರ ಬಾಳಿಗೆ ದಾರಿ ದೀಪವಾಗಿದೆ. ಬಾಳೆಹೊನ್ನೂರು ರಂಭಾಪುರಿ ಪೀಠ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಜಾತಿ ಧರ್ಮಗಳ ಸಂಘರ್ಷಮಯ ಇಂದಿನ ದಿನಗಳಲ್ಲಿ ರಂಭಾಪುರಿ ಪೀಠದ ಸಂದೇಶ ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆ ಮೂಡಿ ಬರಲು ಕಾರಣವಾಗಿರುತ್ತದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕೆಇಬಿ ವೃತ್ತದಲ್ಲಿರುವ ಸಂಗಮೇಶ್ವರ ದೇವಸ್ಥಾನದಿಂದ ಬಸವೇಶ್ವರ ಶಾಲಾ ಆವರಣದವರೆಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಸಾಗಿದರು, ವೀರಗಾಸೆ ಹಾಗೂ ಬಸವೇಶ್ವರ ವಿದ್ಯಾ ಸಂಸ್ಥೆಯ ಮಕ್ಕಳಿಂದ ಜಗದ್ಗುರು ರೇಣುಕಾಚಾರ್ಯ ಜೀವನಾಧಾರಿತ ನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್. ಜಯಣ್ಣ, ಸಹ ಕಾರ್ಯದರ್ಶಿ ಡಾ.ಜಯರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅಜಿತ್ ಚಿಕ್ಕಕಣಗಾಲ್, ಶ್ರೀ ಜಗದ್ಗುರು ರೇಣುಕಾ ಸೇವಾ ಸಮಿತಿಯ ಉಪಾಧ್ಯಕ್ಷ ಮರಿಸ್ವಾಮಿ, ಖಜಾಂಚಿ ವಕೀಲ ಮಹೇಶ್ ಮುರುಡೂರು, ಸಹಕಾರ್ಯದರ್ಶಿ ಆನಂದ್, ನಿರ್ದೇಶಕರಾದ ಮೋಹನ್ ಮಾವನೂರು, ನವೀನ್ ಬೈರಾಪುರ, ನಿಂಗರಾಜು, ಜಯಣ್ಣ, ಪೂರ್ಣಿಮಾ, ದೊರೆ ಸೇರಿದಂತೆ ಸುಮಾಜದ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net