ಬೀದಿ ಬದಿಯ ಅನಧಿಕೃತ ಗೂಡಂಗಡಿ ಎತ್ತಗಂಡಿ

ಹಾಸನ ನಗರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಅನಧಿಕೃತ ರಸ್ತೆ ಬದಿ ಗೂಡಂಗಡಿ, ತಳ್ಳುವಗಾಡಿ ಹಾಗೂ ಬೀದಿ ಬದಿ ವ್ಯಾಪಾರಗಳ ವಿರುದ್ಧದ ವಿಶೇಷ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.
ಹಾಸನ ನಗರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಅನಧಿಕೃತ ರಸ್ತೆ ಬದಿ ಗೂಡಂಗಡಿ, ತಳ್ಳುವಗಾಡಿ ಹಾಗೂ ಬೀದಿ ಬದಿ ವ್ಯಾಪಾರಗಳ ವಿರುದ್ಧದ ವಿಶೇಷ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬೀದಿ ಬದಿಯ ಅನಧಿಕೃತ ಗೂಡಂಗಡಿ ಎತ್ತಗಂಡಿ
  • ಹಾಸನದಲ್ಲಿ ಮುಂದುವರಿದ ತೆರವು ಕಾರ್ಯಾಚರಣೆ
  • ಸ್ವಯಂ ಪ್ರೇರಣೆಯಿಂದ ತೆರವಿಗೆ ಪಾಲಿಕೆ ಮನವಿ

ಹಾಸನ:

ನಗರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ರಸ್ತೆ ಬದಿಯಲ್ಲಿನ ಅನಧಿಕೃತ ಗೂಡಂಗಡಿ, ತಳ್ಳುವಗಾಡಿ ಹಾಗೂ ಬೀದಿ ಬದಿ ವ್ಯಾಪಾರಗಳ ವಿರುದ್ಧ ಹಾಸನ ಮಹಾನಗರ ಪಾಲಿಕೆ ಕೈಗೊಂಡಿರುವ ವಿಶೇಷ ತೆರವು ಕಾರ್ಯಾಚರಣೆ ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಅತಿಕ್ರಮಣ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎವಿಕೆ ಕಾಲೇಜು ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ರಸ್ತೆ ಬದಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಗೂಡಂಗಡಿಗಳು, ತಳ್ಳುವಗಾಡಿಗಳು ಹಾಗೂ ಇತರ ತಾತ್ಕಾಲಿಕ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಿದರು.

ಕಾರ್ಯಾಚರಣೆ ವೇಳೆ ಹಲವು ವ್ಯಾಪಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಯಿತು.
ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ವಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ನಡೆಸದಂತೆ ಸೂಚಿಸಲಾಗಿತ್ತು. ಗುರುವಾರ ಮೊದಲ ಹಂತದ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದರೂ, ಕೆಲವರು ಮತ್ತೆ ಅದೇ ಸ್ಥಳಗಳಲ್ಲಿ ವ್ಯಾಪಾರ ಆರಂಭಿಸಿದ್ದರಿಂದ ಶುಕ್ರವಾರವೂ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದರು.
ನಗರದ ಪ್ರಮುಖ ರಸ್ತೆಗಳು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಮೀಸಲಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ನೋಡಿಕೊಳ್ಳುವುದು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ ಎಂದರು.
ರಸ್ತೆ, ಪಾದಚಾರಿ ಮಾರ್ಗ ಹಾಗೂ ಜಂಕ್ಷನ್‌ಗಳ ಬಳಿ ಯಾವುದೇ ರೀತಿಯ ಗೂಡಂಗಡಿ ಅಥವಾ ತಳ್ಳುವಗಾಡಿ ಇಟ್ಟು ವ್ಯಾಪಾರ ನಡೆಸಲು ಅವಕಾಶವಿಲ್ಲ. ಶನಿವಾರ ಡೇರಿ ವೃತ್ತ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಗೂಡಂಗಡಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಿ ಕೊಳ್ಳಬೇಕು. ಇಲ್ಲವಾದರೆ ಪಾಲಿಕೆಯ ತಂಡ ಸ್ಥಳಕ್ಕೆ ತೆರಳಿ ಯಾವುದೇ ಪೂರ್ವ ಸೂಚನೆ ಇಲ್ಲದೆ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆ ಬದಿಯ ಅತಿಕ್ರಮಣದಿಂದ ವಾಹನ ದಟ್ಟಣೆ ಹೆಚ್ಚುವುದು, ಪಾದಚಾರಿಗಳಿಗೆ ತೊಂದರೆಯಾಗುವುದು ಹಾಗೂ ಅಪಘಾತಗಳ ಸಂಭವ ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆ ಮತ್ತು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಬೀದಿಬದಿ ವ್ಯಾಪಾರಿಗಳು ಪಾಲಿಕೆಯೊಂದಿಗೆ ಸಹಕರಿಸಿ, ನಿಗದಿತ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸುವಂತೆ ಮನವಿ ಮಾಡಿದರು.
ನಗರದ ಪ್ರಮುಖ ರಸ್ತೆಗಳನ್ನು ಅತಿಕ್ರಮಣ ಮುಕ್ತಗೊಳಿಸುವ ವಿಶೇಷ ಅಭಿಯಾನ ಮುಂದುವರಿಯಲಿದ್ದು, ನಿಯಮ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net